ಬೆಳಗಾವಿ

ಸಂಕೇಶ್ವರದಿಂದ ಗುಡ್ಡಾಪುರಕ್ಕೆ ಶ್ರೀ ದಾನಮ್ಮದೇವಿಯ 25ನೇ ವರ್ಷದ ಪಾದಯಾತ್ರೆ ಆರಂಭ

ಸಂಕೇಶ್ವರದಿಂದ ಗುಡ್ಡಾಪುರಕ್ಕೆ ಶ್ರೀ ದಾನಮ್ಮದೇವಿಯ 25ನೇ ವರ್ಷದ ಪಾದಯಾತ್ರೆ ಆರಂಭ
ಸಂಕೇಶ್ವರ, ನ. 27: ಸಂಕೇಶ್ವರದಿಂದ ಗುಡ್ಡಾಪುರಕ್ಕೆ ತೆರಳುವ ಶ್ರೀ ದಾನಮ್ಮದೇವಿ (ತ್ರಿಕಾಲ ಪೂಜಿತೆ ವರದಾನೇಶ್ವರಿ)ಯ 25ನೇ ವರ್ಷದ ಪಾದಯಾತ್ರೆ ಭಕ್ತಿಭಾವದಿಂದ ಆರಂಭಗೊಂಡಿತು. ಹತ್ತರಗಿ ಕಾರಿಮಠದ ಗುರುಸಿದ್ದೇಶ್ವರ ಮಹಾಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸಂಕೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ದೇವಿಯ ಕೃಪೆ ದೊರೆಯಲಿ. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಿ ರೈತರಿಗೆ ಒಳಿತಾಗಲಿ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಇಷ್ಟಾರ್ಥಗಳು ಈಡೇರಲಿ ಎಂದು ಹಾರೈಸಿದರು.

ಐದು ದಿನಗಳ ಪಾದಯಾತ್ರೆಯ ಅಂಗವಾಗಿ ಡಿ. 2ರ ಬುಧವಾರ ಸಂಜೆ 7 ಗಂಟೆಗೆ ಗುಡ್ಡಾಪುರದಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ಡಿ. 3ರ ಗುರುವಾರ ಬೆಳಿಗ್ಗೆ ಶ್ರೀ ದಾನಮ್ಮದೇವಿಗೆ ಮಹಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಹಾಗೂ ದಂಡಿ ಕಟ್ಟುವ ಧಾರ್ಮಿಕ ವಿಧಿಗಳು ನಡೆಯಲಿದ್ದು, ಹೋಳಿಗೆಯ ಮಹಾಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಡಿ. 5ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಸಂಕೇಶ್ವರದ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಮಹಾಪೂಜೆ ಹಾಗೂ ಮಹಾಪ್ರಸಾದ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಕೇಶ್ವರದ ಶ್ರೀ ದಾನಮ್ಮದೇವಿ ಪಾದಯಾತ್ರೆ ಸಮಿತಿ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಸುದ್ದಿ ಓದಿ