ಲೋಕಸಭೆ ಚರ್ಚೆಗೆ ಮುನ್ನ ಮಸೂದೆಗಳ ಪ್ರತಿಗಳನ್ನು ಹಂಚದ ಕೇಂದ್ರದ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ
ನವದೆಹಲಿ, ನ. 27 — ನವೆಂಬರ್ 30ರ ಸೋಮವಾರ ಲೋಕಸಭೆಯಲ್ಲಿ ಚರ್ಚೆಗೆ ನಿಗದಿಯಾಗಿರುವ ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಇತರ ಮಸೂದೆಗಳ ಪ್ರತಿಗಳನ್ನು ಸಂಸದರಿಗೆ ನೀಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಳಂಬ ಮಾಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ಆರೋಪಿಸಿದರು.
ಶುಕ್ರವಾರ ಸಂಜೆ 6 ಗಂಟೆಯವರೆಗೂ ಮಸೂದೆಗಳ ಪ್ರತಿಗಳು ಸಂಸದರಿಗೆ ತಲುಪಿರಲಿಲ್ಲ. ಇದರಿಂದ ಚರ್ಚೆಗೆ ಮುನ್ನ ಮಸೂದೆಗಳಲ್ಲಿನ ಪ್ರಸ್ತಾವಗಳನ್ನು ಅಧ್ಯಯನ ಮಾಡಲು ಸಂಸದರಿಗೆ ಅತಿ ಕಡಿಮೆ ಸಮಯ ಉಳಿದಿದೆ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದರು. ಈ ವಿಳಂಬವನ್ನು ‘ಅಸಾಧಾರಣ ಮತ್ತು ಸಂಪೂರ್ಣವಾಗಿ ಒಪ್ಪಲಾಗದ ನಡೆ’ ಎಂದು ಬಣ್ಣಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದರು.
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಪ್ರಸ್ತಾವಿತ ಸಂವಿಧಾನ ತಿದ್ದುಪಡಿಗಳ ಕುರಿತು ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ರಮೇಶ್ ಈ ಹೇಳಿಕೆ ನೀಡಿದ್ದಾರೆ.
ಪ್ರಸ್ತಾವಿತ ಬದಲಾವಣೆಗಳ ಸಮಯ, ವ್ಯಾಪ್ತಿ ಮತ್ತು ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ವ್ಯಾಪಕ ಸಮಾಲೋಚನೆ ಮತ್ತು ಸಂಸತ್ತಿನಲ್ಲಿ ಸವಿಸ್ತಾರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿವೆ. ಮಸೂದೆಗಳನ್ನು ಕೈಗೆತ್ತಿಕೊಳ್ಳಲು ಸಂಸತ್ತಿನ ವಿಶೇಷ ಸಭೆ ಕರೆದಿರುವ ಸರ್ಕಾರದ ನಿರ್ಧಾರವನ್ನೂ ಕಾಂಗ್ರೆಸ್ ಪ್ರಶ್ನಿಸಿದೆ. ಚರ್ಚೆ ಮತ್ತು ಮತದಾನಕ್ಕೂ ಮುನ್ನ ಮಸೂದೆಗಳನ್ನು ಅಧ್ಯಯನ ಮಾಡಲು ಸಂಸದರಿಗೆ ಸಾಕಷ್ಟು ಸಮಯ ನೀಡಬೇಕು ಎಂದು ಪಕ್ಷ ಆಗ್ರಹಿಸಿದೆ.