ಅನಂತನಾಗ್ ಶಾಸಕ ಪೀರ್ಜಾದಾ ಮೊಹಮ್ಮದ್ ಸಯೀದ್ ನಿಧನಕ್ಕೆ ಕಾಂಗ್ರೆಸ್ ಸಂತಾಪ
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತ್ಯೇಕ ಸಂದೇಶಗಳನ್ನು ಪ್ರಕಟಿಸಿದ ಕಾಂಗ್ರೆಸ್ ನಾಯಕರು, ಸಯೀದ್ ಅವರ ಕುಟುಂಬಸ್ಥರು, ಸ್ನೇಹಿತರು ಮತ್ತು ಬೆಂಬಲಿಗರಿಗೆ ಸಾಂತ್ವನ ಹೇಳಿದರು. ಪಕ್ಷದ ಮೇಲಿನ ಸಯೀದ್ ಅವರ ನಿಷ್ಠೆ ಮತ್ತು ಜನಸೇವೆಯನ್ನು ಖರ್ಗೆ ಸ್ಮರಿಸಿದರು. ರಾಹುಲ್ ಗಾಂಧಿ ಅವರು ಸಯೀದ್ ಅವರನ್ನು ಅನಂತನಾಗ್ನ ಜನಪ್ರಿಯ ಶಾಸಕ ಎಂದು ಬಣ್ಣಿಸಿ, ಜಮ್ಮು ಮತ್ತು ಕಾಶ್ಮೀರದ ಸಾರ್ವಜನಿಕ ಬದುಕಿಗೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು. ಪಕ್ಷ ಮತ್ತು ಜನಸೇವೆಯ ಬಗ್ಗೆ ಸಯೀದ್ ಹೊಂದಿದ್ದ ಬದ್ಧತೆಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಮರಿಸಿದರು.
ಅನಂತನಾಗ್ ಜಿಲ್ಲೆಯ ಕೋಕರನಾಗ್ ಪ್ರದೇಶದ ದಮ್ಹಾಲ್ ಗ್ರಾಮದಲ್ಲಿ 1953ರ ಆಗಸ್ಟ್ನಲ್ಲಿ ಜನಿಸಿದ ಸಯೀದ್, 1980ರಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. 1977ರಿಂದ 1986ರವರೆಗೆ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, 2003ರಿಂದ 2008ರವರೆಗೆ ಸಮಿತಿಯ ಅಧ್ಯಕ್ಷರಾಗಿದ್ದರು.
ಸಯೀದ್ 1987ರಲ್ಲಿ ಕೋಕರನಾಗ್ ಕ್ಷೇತ್ರದಿಂದ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾದರು. 2002 ಮತ್ತು 2008ರ ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಗೆದ್ದರು. ಫಾರೂಕ್ ಅಬ್ದುಲ್ಲಾ, ಮುಫ್ತಿ ಮೊಹಮ್ಮದ್ ಸಯೀದ್, ಗುಲಾಂ ನಬಿ ಆಜಾದ್ ಮತ್ತು ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರಗಳಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದರು. ಶಿಕ್ಷಣ, ಕ್ರೀಡೆ, ಹಜ್ ಮತ್ತು ಔಕಾಫ್ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆಗಳನ್ನು ಅವರು ನಿರ್ವಹಿಸಿದ್ದರು.
1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಂತನಾಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಯೀದ್, 2014ರ ವಿಧಾನಸಭಾ ಚುನಾವಣೆಯಲ್ಲಿ ಕೋಕರನಾಗ್ ಕ್ಷೇತ್ರದಲ್ಲಿ ಸೋತ ಬಳಿಕವೂ ಪಕ್ಷದಲ್ಲಿ ಸಕ್ರಿಯರಾಗಿದ್ದರು. 2024ರ ವಿಧಾನಸಭಾ ಚುನಾವಣೆಯಲ್ಲಿ ಅನಂತನಾಗ್ ಕ್ಷೇತ್ರದಿಂದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಭ್ಯರ್ಥಿ ಮೆಹಬೂಬ್ ಬೇಗ್ ಅವರನ್ನು 1,686 ಮತಗಳಿಂದ ಸೋಲಿಸಿ ಮತ್ತೆ ವಿಧಾನಸಭೆಗೆ ಆಯ್ಕೆಯಾದರು.