ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು: ಕೋನರೆಡ್ಡಿ
ಇಂಡಿ 21: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಬಜೆಟಿನಲ್ಲಿ ಇಂಡಿ ತಾಲೂಕಿನ ನೀರಾವರಿ ಯೋಜನೆಗಾಗಿ ಹಣ ಮೀಸಲಿಡಬೇಕು. ಇಲ್ಲದಿದ್ದರೆ ಹೋರಾಟ ನಿಲ್ಲುವದಿಲ್ಲ. ಕುಮಾರಸ್ವಾಮಿ ತಮ್ಮ ಬೆಂಬಲ ಸೂಚಿಸಿ ನನ್ನನ್ನು ಪ್ರತಿನಿಧಿಯಾಗಿ ಕಳುಹಿಸಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಮತ್ತು ನವಲಗುಂದ ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಹೇಳಿದರು.
ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮುಂದುವರೆದಿದೆ.
ಮಲಪ್ರಭಾ ಕಾಲುವೆ ಕುರಿತು ಅನೇಕ ದಿನಗಳ ವರೆಗೆ ಹೋರಾಟ ಮಾಡಿದ್ದೇವೆ. 35 ಪಾದಯಾತ್ರೆ ಮಾಡಿದ್ದೇವೆ. ಪ್ರತಿಫಲವಾಗಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಿದ್ದಾಗ 1065 ಕೋಟಿ ರೂ ಮೊದಲ ಕಂತವಾಗಿ ಮತ್ತು ನಂತರ 600 ಕೋಟಿ ರೂ ಅನುದಾನ ಬಂದಿದ್ದು ಕೇವಲ ಹೋರಾಟ ಪ್ರತಿಫಲ ಎಂದರು. ನವಲಗುಂದದಲ್ಲಿ ನಮ್ಮ ನೀರಾವರಿ ಹಕ್ಕಿಗಾಗಿ ರೈತರ ಏಳಿಗೆಗಾಗಿ ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿದ್ದಾರೆ ಎಂದರು. ಕಳೆದ 20 ದಿನಗಳಿಂದ ಇಂಡಿಯಲ್ಲಿ ಹೋರಾಟ ಮಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಜಲಸಂಪನ್ಮೂಲ ಸಚಿವರಾಗಲೀ ಭೇಟಿ ನೀಡದಿರುವದು ಪ್ರಜಾಪ್ರಭುತ್ಬದ ದುರ್ದೈವ. ರೈತರು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದು ಸೌಜನ್ಯಕ್ಕಾದರೂ ಭೇಟಿ ನೀಡಬೇಕಾಗಿತ್ತು , ಭೇಟಿ ನೀಡದೇ ಇರುವದು ಸಚಿವರಿಗೆ ಶೋಭೆತರುವದಿಲ್ಲ ಎಂದರು.
ಜೆ.ಡಿ ಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ ಹೊರ್ತಿ ಮತ್ತು ಝಳಕಿ ರಾಷ್ಟ್ರೀಯ ಹೆದ್ದಾರೆ ಬಂದ ಮಾಡಿ ದ್ದೇವೆ, ತಹಸೀಲ್ದಾರ ಕಚೇರಿಗೆ ಬೀಗ ಹಾಕಿದ್ದೇವೆ, ವಿವಿಧ ರೀತಿಯ ಹೋರಾಟ ಮಾಡಿದರೂ ಸರಕಾರ ಸ್ಪಂದಿಸುತ್ತಿಲ್ಲ. ಶುಕ್ರವಾರ ಅಥವಾ ಶನಿವಾರ ಇಂಡಿ ಬಂದಗೆ ಕರೆ ನೀಡುತ್ತೇವೆ , ವ್ಯಾಪ್ಯಾರಸ್ಥರ, ಶಾಲಾ ಕಾಲೇಜು ವಿದ್ಯಾರ್ಥಿಗಳ, ಸಂಘಟನೆಗಳ ಬೆಂಬಲ ಪಡೆದು ತಿರ್ಮಾನಿಸುತ್ತೇವೆ ಎಂದರು.
ಜೆಡಿ ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ ಹೋರಾಟ ಹತ್ತಿಕ್ಕಲು ಹೋರಾಟಗಾರರ ಮೇಲೆ ಎಫ್.ಐ.ಆರ್ ಕೇಸು ದಾಖಲಿಸುವದಾಗಿ ಕೇಳಿ ಬರುತ್ತಿದ್ದು ಹಾಗೇನಾದರೂ ಆದರೆ ಕುಮಾರಸ್ವಾಮಿ, ಕೋನರೆಡ್ಡಿ ಎಲ್ಲರೂ ಇಂಡಿಗೆ ಬಂದು ಕೇಸು ಹಾಕಿದವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಶ್ರೀಶೈಲಗೌಡ ಪಾಟೀಲ, ವಿಜಯಕುಮಾರ ಭೋಸಲೆ, ರಾಜುಗೌಡ, ಮಹಿಬೂಬ ಬೇವನೂರ ಮಾತನಾಡಿದರು. ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ಬಸವರಾಜ ಹಂಜಗಿ, ತಾನಾಜಿ ಪವಾರ, ಶಿವಕುಮಾರ ಭೋಸಲೆ, ಅಂಬಣ್ಣ ವಾಗೆ, ರಾಜಕುಮಾರ ಬನಗೊಂಡೆ, ಬಸವರಾಜ ದುದ್ದಗಿ, ವಿಕಾಸ ನಿಕಂ ಮತ್ತಿತರಿದ್ದರು.