ಅಥಣಿ

ಖಿಳೇಗಾಂವ ಬಸವೇಶ್ವರ ಯೋಜನೆ ಡಿಸೆಂಬರ ಅಂತ್ಯದವರೆಗೆ ಪೂರ್ಣ

ಖಿಳೇಗಾಂವ ಬಸವೇಶ್ವರ ಯೋಜನೆ ಡಿಸೆಂಬರ ಅಂತ್ಯದವರೆಗೆ ಪೂರ್ಣ

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ವಿವಿಧ ಕಾಮಗಾರಿಗಳಿಗೆ ಚಾಲನೆ 

ಅಥಣಿ 18: ಖಿಳೇಗಾಂವ ಬಸವೇಶ್ವರ ಯೋಜನೆ ಸಂಬಂಧ ಇತ್ತೀಚಿಗೆ ಸಿಎಮ್ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಜರುಗಿದ್ದು, ಈ ಸಭೆಯಲ್ಲಿ ನಾನು ಅರಭಾವಿ ಶಾಸಕ ಹಾಗೂ ಕೆ.ಎಮ್‌.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಹಾಗೂ ಕೊಳಗೇರಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಮತ್ತು ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ, ಪ್ರಿನ್ಸಿಪಲ್ ಸೆಕ್ರೆಟರಿ ಭಾಗವಹಿಸಿ ಕಾಮಗಾರಿಯ ಪ್ರಗತಿ ಕುರಿತಾಗಿ ಚರ್ಚಿಸಿದ್ದೇವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ತಿಳಿಸಿದರು.  

ಅವರು ಕಾಗವಾಡ ಮತಕ್ಷೇತ್ರದ 25 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸಂಬರಗಿ ಗ್ರಾಮದಲ್ಲಿ ಮಾತನಾಡುತ್ತಿದ್ದರು.  

ಏತ ನೀರಾವರಿ ಯೋಜನೆಗೆ ಇಲ್ಲಿಯವರೆಗೆ ಸುಮಾರು 900 ಕೋಟಿ ರೂ.ಗಳಷ್ಟು ಅನುದಾನ ಬಳಕೆಯಾಗಿದ್ದು, ಶೇ.80 ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ ಇನ್ನುಳಿದ ಶೇ.20 ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ತಕ್ಷಣ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಆದೇಶಸಿದ್ದಾರೆ. ಈ ಕಾಮಗಾರಿ ಇದೇ ವರ್ಷದ ಡಿಸೆಂಬರ ಅಂತ್ಯದ ವರೆಗೆ ಪೂರ್ಣಗೊಳ್ಳಲಿದ್ದು, ಈ ಕಾಮಗಾರಿಯ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಆಗಮಿಸುತ್ತಾರೆ ಈ ವಿಷಯವನ್ನು ಸ್ವತಃ ಬೊಮ್ಮಾಯಿಯವರೇ ನನಗೆ ಹೇಳಿದ್ದಾರೆ ಎಂದ ಅವರು ಅನುದಾನ ಬಿಡುಗಡೆಯಲ್ಲಿ ಯಾವುದೇ ಗೊಂದಲ ಇಲ್ಲ ಹಂತ ಹಂತವಾಗಿ ಈ ಯೋಜನೆಗೆ ಅನುದಾನ ಬಿಡುಗಡೆಯಾಗುತ್ತಿದ್ದು, ಡಿಸೆಂಬರ ಅಂತ್ಯದೊಳಗಾಗಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು.  

ಕಾಗವಾಡ ಮತಕ್ಷೇತ್ರದಲ್ಲಿ ಒಂದೇ ದಿನ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 25 ಕೋಟಿ ಅನುದಾನದಲ್ಲಿ ಮಂಜೂರಾದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ದ್ವಿತೀಯ ಹಂತದಲ್ಲಿ ಎಸ್‌.ಇ.ಪಿ/ಟಿ.ಎಸ್‌.ಪಿ ಯೋಜನೆಯಡಿ ಪರಿಶಿಷ್ಠ ಪಂಗಡದ ಸಮುದಾಯದ ರೈತರಿಗಾಗಿ 18 ಕೊಳವೆ ಭಾವಿ, ಎಸ್‌.ಟಿ ಸಮುದಾಯಕ್ಕೆ 19 ಕೊಳವೆ ಭಾವಿಗಳನ್ನು ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗಿವೆ ಎಂದ ಅವರು ಚುನಾವಣಾ ಪೂರ್ವದಲ್ಲಿ ನಾನು ಕ್ಷೇತ್ರದ ಜನತೆಗೆ ನೀಡಿದ ಭರವಸೆಗಳಿಗುಣವಾಗಿ ಕೆಲಸ ಮಾಡುತ್ತಿರುವೆ ಎಂದರು.  

ಮಾಜಿ ತಾ.ಪಂ ಅಧ್ಯಕ್ಷ ರಾಮ ಸೊಡ್ಡಿ ಮಾತನಾಡಿ, ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲರ ನೇತೃತ್ವದಲ್ಲಿ ಕಾಗವಾಡ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಂಡಿದ್ದು, ಚುನಾವಣೆ ಪೂರ್ವದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳು ಕಾಗವಾಡ ಮತಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.  

ನಾಗನೂರ ಪಿ.ಎ.ಗ್ರಾಮದ ಪ್ರಗತಿ ಪರ ರೈತ ಹಾಗೂ ಮಾಜಿ ಗ್ರಾ.ಪಂ ಸದಸ್ಯ ಬಸವಗೌಡ ಪಾಟೀಲ ಮಾತನಾಡಿ, ಕಳೆದ 50 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳ್ಳದ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳು ಶ್ರೀಮಂತ ಪಾಟೀಲರ ಅವಧಿಯಲ್ಲಿ ಪೂರ್ಣಗೊಳ್ಳುತ್ತಿದ್ದು, ಈ ಭಾಗದ ಜನತೆ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.  

ಬಿಜೆಪಿ ಧುರೀಣರಾದ ಮಹಾದೇವ ಕೋರೆ, ಮುರಿಗೆಪ್ಪ ಮಗದುಮ್, ವಿನಾಯಕ ಬಾಗಡಿ, ಆರ್‌.ಎಮ್‌.ಪಾಟೀಲ, ಈಶ್ವರ ಕುಂಬಾರೆ, ಅಧಿಕಾರಿಗಳಾದ ಜಯಾನಂದ ಹಿರೇಮಠ, ವೀರಣ್ಣಾ ವಾಲಿ, ಆರ್‌.ಪಿ.ವತಾಡೆ, ಪ್ರವೀಣ ಹುಣಚಿಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ