ರಾಷ್ಟ್ರೀಯ

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ತಿರುವನಂತಪುರ, ಡಿ.31: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ  ಕೃಷಿ ಕಾನೂನುಗಳ ವಿರುದ್ಧ ಎಲ್‌ ಡಿಎಫ್ ಮತ್ತು ಯುಡಿಎಫ್ ಶಾಸಕರ ಬೆಂಬಲದೊಂದಿಗೆ ಕೇರಳ ವಿಧಾನಸಭೆಯು ಗುರುವಾರ ನಿರ್ಣಯ ಅಂಗೀಕರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರೈತರ ಸಮಸ್ಯೆಯನ್ನು ಚರ್ಚಿಸಲು ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ, ಕೇಂದ್ರದ ಕಾನೂನುಗಳ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದರು. ನಿರ್ಣಯಕ್ಕೆ ಬಿಜೆಪಿಯ ಏಕೈಕ ಶಾಸಕ ಒ.ರಾಜಗೋಪಾಲ್ ವಿರೋಧ ವ್ಯಕ್ತಪಡಿಸಿದರು. ಆದರೆ ಅವರು ಅದರ ವಿರುದ್ಧವಾಗಿ ಮತ ಚಲಾಯಿಸಿದರೇ ಎಂಬುದು ಸ್ಪಷ್ಟವಾಗಿಲ್ಲ.

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ಒಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೊಸ ಕಾನೂನುಗಳನ್ನು ತಕ್ಷಣ ರದ್ದುಪಡಿಸುವಂತೆ ಒತ್ತಾಯಿಸಿ ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ವಿಜಯನ್, ದೇಶವು ಈಗ ರೈತರ ತೀವ್ರ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಕೃಷಿ ಕಾನೂನುಗಳು "ರೈತ ವಿರೋಧಿ" ಮಾತ್ರವಲ್ಲದೆ "ಕಾರ್ಪೊರೇಟ್ ಪರ" ವಾಗಿದೆ. ಇದುವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಕನಿಷ್ಠ 32 ರೈತರು ಸಾವನ್ನಪ್ಪಿದ್ದಾರೆ ಎಂದು ಅವರು ಆರೋಪಿಸಿದರು

ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ಕೆಲವು ಕಾನೂನುಗಳ ಬಗ್ಗೆ ಜನರು ಆತಂಕವನ್ನು ವ್ಯಕ್ತಪಡಿಸುವಾಗ ಶಾಸಕಾಂಗ ಸಭೆಗಳು ಇವುಗಳ ಬಗ್ಗೆ ಗಂಭೀರವಾದ ನಿಲುವುಗಳನ್ನು ತೆಗೆದುಕೊಳ್ಳುವ ನೈತಿಕ ಜವಾಬ್ದಾರಿಯನ್ನು ಹೊಂದಿವೆ. ಕೃಷಿ ದೇಶದ ಸಂಸ್ಕೃತಿಯ ಭಾಗವಾಗಿದ್ದು,  ಕೃಷಿ ಕ್ಷೇತ್ರವು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ ರೈತರ ವಿರೋಧಿಯಾದ ಈ ಕಾನೂನುಗಳನ್ನು ಜಾರಿಗೆ ತಂದಿದೆ, ಇದರ ಪರಿಣಾಮವಾಗಿ ರೈತರು ಆತಂಕಕ್ಕೊಳಗಾಗಿದ್ದು, ಪ್ರಸ್ತುತ ಬೆಂಬಲ ಬೆಲೆಯನ್ನು ಸಹ ಕಳೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಪಂಜಾಬ್ ಮುಖ್ಯಮಂತ್ರಿ "ರೈತ ವಿರೋಧಿ" ಕಾನೂನುಗಳ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಕರಡು ನಿರ್ಣಯವನ್ನು ಮಂಡಿಸಿ, ಅನುಮೋದನೆ ಪಡೆದಿದ್ದರು.  ಎಲ್ಲಾ ಪಕ್ಷಗಳು ರಾಜಕೀಯ ಹಿತಾಸಕ್ತಿಗಳಿಗಿಂತ ರೈತರ ಹಿತಾಸಕ್ತಿ ಕಾಪಾಡಲು ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುದ್ದಿ ಓದಿ