ಹಾವೇರಿ

ಸಪ್ತರ್ಷಿಗಳ ತ್ಯಾಗದ ಫಲವಾಗಿ ಹೆಮ್ಮರವಾಗಿ ಬೆಳೆದ ಕೆ.ಎಲ್‌.ಇ. ಸಂಸ್ಥೆ

ಸಪ್ತರ್ಷಿಗಳ ತ್ಯಾಗದ ಫಲವಾಗಿ ಹೆಮ್ಮರವಾಗಿ ಬೆಳೆದ ಕೆ.ಎಲ್‌.ಇ. ಸಂಸ್ಥೆ
The K.L.E. Society, which has grown into a massive tree as a result of the sacrifices of the Saptari

ಲೋಕದರ್ಶನ ವರದಿ 


          ಹಾವೇರಿ 13: ಶಿಕ್ಷಣದ ಮೂಲಕ ಸಮಾಜದ ಅಜ್ಞಾನ, ಅಸಮಾನತೆ ಮತ್ತು ಹಿಂದುಳಿದ ಪರಿಸ್ಥಿತಿಯನ್ನು ನಿವಾರಿಸಿ ಜ್ಞಾನದ ಬೆಳಕನ್ನು ಎಲ್ಲೆಡೆ ಪಸರಿಸಬೇಕೆಂಬ ಮಹೋನ್ನತ ಸಂಕಲ್ಪದೊಂದಿಗೆ ಆರಂಭಗೊಂಡ ಕೆ.ಎಲ್‌.ಇ. ಸಂಸ್ಥೆಯು ಇಂದು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ದೇಶದ ಗಮನ ಸೆಳೆದ ಮಹತ್ವದ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಂಸ್ಥೆಯ ಈ ಅಭೂತಪೂರ್ವ ಬೆಳವಣಿಗೆಯ ಹಿಂದೆ ಸಂಸ್ಥಾಪಕ ಸಪ್ತರ್ಷಿಗಳ ತ್ಯಾಗ, ದಾನಿಗಳ ಓದಾರ್ಯ, ಶಿಕ್ಷಣಪ್ರೇಮಿಗಳ ಸಹಕಾರ,

              ದೂರದೃಷ್ಟಿಯ ನಾಯಕತ್ವದ ಸುದೀರ್ಘ ಇತಿಹಾಸವಿದೆ ಎಂದು ಧಾರವಾಡದ ಖ್ಯಾತ ಅಂತರ್‌ರಾಷ್ಟ್ರೀಯ ಹಿಂದೂಸ್ಥಾನಿ ಗಾಯಕ ಡಾ. ಮೃತ್ಯುಂಜಯ ಶೆಟ್ಟರ್ ಹೇಳಿದರು.  ಅವರು ನಗರದ ಕೆ.ಎಲ್‌.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಕೆ.ಎಲ್‌.ಇ. ಸಂಸ್ಥೆಯ 111ನೇ ಸಂಸ್ಥಾಪಕರ ದಿನಾಚರಣೆಯಂದು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.  

ಕೆ.ಎಲ್‌.ಇ. ಸಂಸ್ಥೆಯ ಶತಮಾನದ ಶೈಕ್ಷಣಿಕ ಪಯಣವು ಕೇವಲ ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯ ಕಥೆಯಲ್ಲ; ಅದು ಶಿಕ್ಷಣದ ಮೂಲಕ ಸಮಾಜವನ್ನು ಕಟ್ಟುವ ಮಹತ್ಕಾರ್ಯದ ಯಶೋಗಾಥೆಯಾಗಿದೆ. ಸಂಸ್ಥಾಪಕರು ಅಂದು ಕಂಡ ಕನಸು, ಅವರು ಹಾಕಿಕೊಟ್ಟ ಆದರ್ಶ ಮತ್ತು ಸೇವಾ ಮನೋಭಾವ ಇಂದು ಬೃಹತ್ ಶೈಕ್ಷಣಿಕ ಪರಂಪರೆಯಾಗಿ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳ ಪೋಷಣೆಯೂ ಸಮಾಜದ ಪ್ರಗತಿಗೆ ಅಗತ್ಯವಾಗಿದ್ದು, ಇಂತಹ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. '

           1916ರ ನವೆಂಬರ್ 13ರಂದು ಬೆಳಗಾವಿಯಲ್ಲಿ ಒಂದು ಆಂಗ್ಲೋ-ವೆರ್ನಾಕ್ಯುಲರ್ ಶಾಲೆಯ ಸ್ಥಾಪನೆಯೊಂದಿಗೆ ಆರಂಭವಾದ ಈ ಶೈಕ್ಷಣಿಕ ಆಂದೋಲನದ ಹಿಂದೆ ಉತ್ತರ ಕರ್ನಾಟಕದ ಗ್ರಾಮೀಣ ಜನರಿಗೆ ಶಿಕ್ಷಣ ದೊರಕಿಸಬೇಕೆಂಬ ಉದಾತ್ತ ಆಶಯವಿತ್ತು. ಆ ಕಾಲದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಜನಸಮುದಾಯಕ್ಕೆ ಜ್ಞಾನದ ಬಾಗಿಲು ತೆರೆಯಬೇಕೆಂಬ ಉದ್ದೇಶದಿಂದ ದಾನಿಗಳ ಸಹಕಾರಗಳೊಂದಿಗೆ ಸಪ್ತರ್ಷಿಗಳು ತಮ್ಮ ಬದುಕನ್ನೇ ಶಿಕ್ಷಣ ಸೇವೆಗೆ ಸಮರ​‍್ಿಸಿಕೊಂಡಿದ್ದರು. ಅವರ ನಿಸ್ವಾರ್ಥ ಪರಿಶ್ರಮ, ಸಂಕಲ್ಪಶಕ್ತಿ ಮತ್ತು ತ್ಯಾಗದ ಫಲವಾಗಿ ಸಣ್ಣದಾಗಿ ಆರಂಭಗೊಂಡ ಸಂಸ್ಥೆ ಇಂದು ಶಿಕ್ಷಣ, ವೈದ್ಯಕೀಯ, ತಾಂತ್ರಿಕ, ಕೃಷಿ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದರು.  


ಸುದ್ದಿ ಓದಿ