ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರದಲ್ಲಿ ಪೂರ್ಣಗೊಳ್ಳಲಿ : ಶಾಸಕ ಶ್ರೀಮಂತ ಪಾಟೀಲ ಅಧಿಕಾರಿಗಳಿಗೆ ಸೂಚನೆ: ಯೋಜನೆಯ ಪ್ರಗತಿ ಪರೀಶೀಲನಾ ಸಭೆ
ಲೋಕದರ್ಶನ ವರದಿ
ಅಥಣಿ 27: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಪ್ರಗತಿ ಪರೀಶೀಲನಾ ಸಭೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಅಥಣಿಯ ನೀರಾವರಿ ನಿಗಮ ಕಛೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಮಾಜಿ ಸಚಿವ, ಶಾಸಕ ಶ್ರೀಮಂತ ಪಾಟೀಲ ನೀರಾವರಿ ಯೋಜನೆಯ ಪ್ರಗತಿ ಕುರಿತಾಗಿ ಉಪಸ್ಥಿತರಿದ್ದ ಇಂಜನೀಯರ್ ಹಾಗೂ ಅಧಿಕಾರಿಗಳ ಜೊತೆಗೆ ಕಾಗವಾಡ ಮತಕ್ಷೇತ್ರದ ಈ ನೀರಾವರಿ ಯೋಜನೆಗೆ ಒಳಪಡಲಿರುವ ಗ್ರಾಮಗಳಿಂದ ಆಗಮಿಸಿದ್ದ ರೈತ ಪ್ರತಿನಿಧಿ, ಜನಪ್ರತಿನಿಧಿ ಗಳ ಸಮ್ಮುಖದಲ್ಲಿಯೇ ಚರ್ಚಿಸಿದರು.
ಶಾಸಕ ಶ್ರೀಮಂತ ಪಾಟೀಲರು ಯೋಜನೆಯ ಪ್ರಗತಿ ಹಾಗೂ ವಿಳಂಬ ಕುರಿತಾಗಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಅಭಿಯಂತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಯೋಜನೆ ವಿಳಂಬವಾಗಲು ಕಾರಣ ಏನು ಎಂದು ಪ್ರಶ್ನಿಸಿದರಲ್ಲದೆ ಈ ಯೋಜನೆ ಅತೀ ಶೀಘ್ರದಲ್ಲಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಲು ಸೂಚಿಸಿದರು. ಈಗಾಗಲೇ ಗುತ್ತಿಗೆದಾರರಿಗೆ 10 ಕೋಟಿ ಹಣ ಬಿಡುಗಡೆಯಾಗಿದ್ದು, ಇನ್ನುಳಿದ 12 ಕೋಟಿ ರೂ.ಗಳು ಕೂಡ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಶಾಸಕ ಶ್ರೀಮಂತ ಪಾಟೀಲ ತಿಳಿಸಿದರು.
ಯೋಜನೆ ಅನುಷ್ಠಾನದ ವಿಷಯದಲ್ಲಿ ಯಾವುದೇ ನಿರ್ಲಕ್ಷ ಆಗಬಾರದು ಮತ್ತು ಯೋಜನೆ ಪೂರ್ಣಗೊಳ್ಳಲು ಬೇಕಾಗುವ ಅವಶ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಎಲ್ಲ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಮುಂದಿನ ದಿನಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವವರೆಗೂ ನಿರಂತರವಾಗಿ ಸಭೆ ನಡೆಸಲಾಗುವುದು ಎಂದ ಅವರು ಅತೀ ಶೀಘ್ರದಲ್ಲಿಯೇ ಈ ಯೋಜನೆ ಪೂರ್ಣಗೊಳ್ಳಲಿದ್ದು, ಯಾವುದೇ ಉಹಾಪೋಹಗಳಿಗೆ ಕಿವಿ ಗೊಡಬಾರದು ಎಂದು 22 ಗ್ರಾಮಗಳ ರೈತರಲ್ಲಿ, ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ನೀರಾವರಿ ನಿಗಮದ ಅಧಿಕ್ಷಕ ಇಂಜನೀಯರ್ ಬಿ.ಆರ್.ರಾಠೋಡ್, ಕಾರ್ಯನಿರ್ವಾಹಕ ಅಭಿಯಂತರ ಕೆ.ಕೆ.ಜಾಲಿಬೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ರವಿ, ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೊತದಾರ, ಬಸವರಾಜ ಗಲಗಲಿ, ಮಾಜಿ ಜಿ.ಪಂ ಸದಸ್ಯ ನಿಂಗಪ್ಪ ಖೋಕಲೆ, ಧುರೀಣರಾದ ಶಿವಾನಂದ ಗೊಲಭಾವಿ, ಈಶ್ವರ ಕುಂಬಾರೆ, ಮಹಾದೇವ ಕೋರೆ, ಆರ್.ಎಮ್.ಪಾಟೀಲ, ಸಿದರಾಯ ತೇಲಿ, ಬಿ.ಕೆ.ಚನ್ನರೆಡ್ಡಿ ಸೇರಿದಂತೆ ಪಾರ್ಥನಹಳ್ಳಿ, ಗುಂಡೇವಾಡಿ, ಮದಭಾವಿ, ಬಳ್ಳಿಗೇರಿ ಸೇರಿದಂತೆ ಅನೇಕ ಗ್ರಾಮಗಳ ರೈತ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.