ಇಂಡಿ

ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಕಾರ್ಯಕರ್ತರಿಲ್ಲದೆ ನಾಯಕರಿಲ್ಲ ; ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ; ಕಾರ್ಯಕರ್ತರ ಸಂಕಲ್ಪ ಸಭೆ

ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಕಾರ್ಯಕರ್ತರಿಲ್ಲದೆ ನಾಯಕರಿಲ್ಲ ; ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ; ಕಾರ್ಯಕರ್ತರ ಸಂಕಲ್ಪ ಸಭೆ


ಇಂಡಿ: ಪಿಎಫ್‌ಐ ನಂತಹ ದೇಶದ್ರೋಹಿ ಸಂಘಟನೆ, ಗೋಹತ್ಯೆ ನಿಷೇಧ ಸೇರಿದಂತೆ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಸಂಘಟನೆಗಳನ್ನು ಬ್ಯಾನ್ ಮಾಡಿದ್ದು, ಕೇವಲ 8 ವರ್ಷಗಳಲ್ಲಿ ವಿಶ್ವವೇ ತಿರುಗಿ ಭಾರತದತ್ತ ನೋಡುವಂತೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರದ ಸಾಧನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. 

ಅವರು ಮಂಗಳವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡ ಕಾರ್ಯಕರ್ತರ ಸಂಕಲ್ಪ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

ಬಿಜೆಪಿ ಪಕ್ಷಕ್ಕೆ ಕಾರ‌್ಯಕರ್ತರೇ ಜೀವಾಳ ಕಾರ‌್ಯಕರ್ತರಿಲ್ಲದೆ ನಾಯಕರಿಲ್ಲ. ಕಾರ‌್ಯಕರ್ತರಿಂದಲೇ ನಾಯಕರಾಗಲು ಸಾಧ್ಯ. ಬಿಜೆಪಿ ಪಕ್ಷ ಕಾರ‌್ಯಕರ್ತರನ್ನು ದೇವರ ಸ್ಥಾನದಲ್ಲಿ ನೋಡುತ್ತದೆ ಎಂದ ಅವರು. ವಿಜಯಪೂರದ ವಿಮಾನ ನಿಲ್ದಾಣಕ್ಕೆ 250 ಕೋಟಿ ನೀಡಿದ್ದು, ಬರುವ ಜನೇವರಿಯಲ್ಲಿ ಕಾರ್ಯಾರಂಭ ಮಾಡಲಿದೆ. ರಾಜ್ಯದಲ್ಲಿ ಬಡ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, ರೈತರಿಗೆ ಪಿಎಂ ಕಿಸಾನ್ ಯೋಜನೆಯಲ್ಲಿ ವರ್ಷಕ್ಕೆ 10 ಸಾವಿರ ರೂಪಾಯಿ ನೀಡುತ್ತಿರುವುದು. ರಾಜ್ಯದ ಎಸ್‌ಸಿ. ಸಮುದಾಯಕ್ಕೆ 15 ರಿಂದ 17 ಅ ಮತ್ತು ಎಸ್‌ಟಿ ಸಮುದಾಯಕ್ಕೆ 4 ರಿಂದ 7 ಅ ಪ್ರತಿಶತ ಮೀಸಲಾತಿ ಹೆಚ್ಚಿಸಿದೆ. ರಾಜ್ಯದಲ್ಲಿ ತಳವಾರ ಸಮುದಾಯ ಎಸ್‌ಟಿ ಸೇರಿಸಿರುವ ಕೆಲಸಗಳನ್ನು ರಾಜ್ಯದ ಬೊಮ್ಮಾಯಿ ಮತ್ತು ಕೇಂದ್ರದ ಮೋದಿ ಸರಕಾರ ಮಾಡಿವೆ ಎಂದರು. 

2023ರಲ್ಲಿ ಇಂಡಿ ವಿಧಾನಸಭಾ ಕ್ಷೇತ್ರ ಬಿಜೆಪಿ ಪಕ್ಷದ ಶಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ಇಂಡಿ ಸೇರಿದಂತೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಬಿಜೆಪಿ ಶಾಸಕರು ಆಯ್ಕೆಯಾಗಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಮ್ಮ ಪಕ್ಷವನ್ನು ದಲಿತ ವಿರೋಧಿ ಎಂದು ಬಿಂಬಿಸಿದ್ದರು. ಆದರೆ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿದ್ದಲ್ಲದೆ. ತಳವಾರ ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಿ ಪ್ರಮಾಣಪತ್ರ ಸಹ ನೀಡಿ ನಮ್ಮ ಸರಕಾರ ಜನಪರ ಸರಕಾರವಾಗಿದೆ ಎಂಬುದನ್ನು ಸಾಬೀತು ಮಾಡಿದೆ ಎಂದರು. 

ಸಂಸದ ರಮೇಶ ಜಿಗಜಿಣಗಿ ಮಾತನಾಡಿ ಬಿಜೆಪಿ ಪಕ್ಷ ಜಾತಿ ಆಧಾರಿತ ಪಕ್ಷವಲ್ಲ. ಈ ಪಕ್ಷದಲ್ಲಿ ಸರ್ವ ಸಮುದಾಯದವರು ಕಾರ್ಯಕರ್ತರಿದ್ದಾರೆ ಎಂದ ಅವರು ಶಿಸ್ತಿನ ಪಕ್ಷವಾಗಿರುವ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರಕಾರದ ಹಲವು ಜನಪರ ಹಾಗೂ ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಮನೆ ಮನೆಗೆ ತೆರಳಿ ಜನರಿಗೆ ಮುಟ್ಟಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕೆಂದರು. 

ಬಿಜೆಪಿ ರಾಜ್ಯ ಪ್ರದಾನ ಕಾರ‌್ಯದರ್ಶಿ ಸಿದ್ದರಾಜು, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ,  ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಸಿದ್ದಲಿಂಗ ಹಂಜಗಿ, ರಾಜಕುಮಾರ ಸಗಾಯಿ,  ರವಿ ವಗ್ಗೆ ಮಾತನಾಡಿದರು.  

ವೇದಿಕೆಯ ಮೇಲೆ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ರಾಜು ಪೂಜಾರಿ, ಶಿವರುದ್ರ ಬಾಗಲಕೋಟ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು. 


ಬಾಕ್ಸ್‌-1 

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಇಂಡಿ ನಗರಕ್ಕೆ ಆಗಮಿಸುತ್ತಿರುವುದು ಒಂದು ವಾರದ ಮೊದಲೇ ಗೊತ್ತಿದ್ದರೂ, ಸ್ಥಳೀಯ ನಾಯಕರುಗಳು ಕಾರ್ಯಕರ್ತರನ್ನು ಸೇರಿಸುವಲ್ಲಿ ವಿಫಲರಾಗಿದ್ದಾರೆ. ಅರುಣ್ ಸಿಂಗ್ ಸೇರಿದ ಕಾರ‌್ಯಕ್ರಮದಲ್ಲಿ ಕೇವಲ 900 ರಷ್ಟು ಜನ ಮಾತ್ರ ಕಾರ‌್ಯಕರ್ತರು ಭಾಗಿಯಾಗಿದ್ದರು. ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಆದರೆ ಉಸ್ತುವಾರಿಗಳು ಆಗಮಿಸುವ ಸಂದರ್ಭದಲ್ಲಿ ಜನರನ್ನು ಸೇರಿಸುವಲ್ಲಿ ಟಿಕೆಟ್ ಆಕಾಂಕ್ಷಿಗಳು ಸಹ ವಿಫಲರಾಗಿದ್ದು ಪಕ್ಷದಲ್ಲಿನ ನಾಯಕರ ಹೊಂದಾಣಿಕೆ ಇಲ್ಲದಿರುವಿಕೆ ಕಂಡು ಬರುತ್ತಿದೆ. 


ಸುದ್ದಿ ಓದಿ