ಉದ್ದವ್ ಠಾಕ್ರೆ, ಸಚೀನ ಸಾವಂತ್ ಹೇಳಿಕೆ ಖಂಡನೀಯ
ಗೋಕಾಕ 21: ಬೆಳಗಾವಿ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹಾಗೂ ಮಹಾರಾಷ್ಟ್ರ ರಾಜಕೀಯ ಮುಖಂಡ ಸಚೀನ ಸಾವಂತ್ ಹೇಳಿಕೆಯನ್ನು ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷ ಅಯೂಬ ಪೀರಜಾದೆ ಖಂಡಿಸಿದ್ದಾರೆ.
ಬುಧವಾರದಂದು ಈ ಕುರಿತು ಪತ್ರಿಕಾ ಪ್ರಕಟನೆ ನೀಡಿದ ಅವರು ಕನ್ನಡಿಗ ವೀರರು ಮಹಾರಾಷ್ಟ್ರದ ಬಹುಪಾಲನ್ನು ಆಳಿದ್ದಾರೆ. ಕನ್ನಡಿಗರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಕಿತ್ತೂರ ಚನ್ನಮ್ಮ, ಸಂಗೋಳ್ಳಿ ರಾಯಣ್ಣನವರು ಆಳಿದ ನೆಲೆಯಿದು. ಬೆಳಗಾವಿ ಅಷ್ಟೇ ಅಲ್ಲ, ಕರ್ನಾಟಕದ ಒಂದಿಂಚೂ ಭೂಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ರಾಜಕೀಯ ಮುಖಂಡರು ಒಂದು ಬಾರಿ ಇತಿಹಾಸವನ್ನು ಅವಲೋಕಿಸಿ ಹಗಲು ಕನಸು ಕಾಣುವುದನ್ನು ಬಿಡಬೇಕು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಹಾಜನ್ ವರದಿಯಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಇದಾಗಿಯೂ ಮಹಾರಾಷ್ಟ್ರ ತನ್ನ ಕಿತಾಪತಿ ನಿಲ್ಲಿಸಿಲ್ಲ.ಗಡಿವಿವಾದ ಸುಪ್ರೀಂ ಕೋರ್ಟನಲ್ಲಿ ವಿಚಾರಣೆಯಲ್ಲಿ ಇರುವಾಗ ತಮಗೆ ಬೇಕಾದ ದಾಖಲೆಗಳ್ನು ಸೃಷ್ಠಿ ಮಾಡಿಕೊಳ್ಳಲು ಮಾಡುತ್ತಿರುವ ಹುನ್ನಾರ ಇರಬಹುದು. ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಹಗುರವಾಗಿ ಪರಿಗಣಿಸಬಾರದು.ಸಿಎಂ ಯಡಿಯೂರಪ್ಪನವರು ಕರ್ನಾಟಕದ ಒಂದಿಂಚೂ ನೆಲವನ್ನು ಕೊಡುವುದಿಲ್ಲ ಎಂದು ಕಠಿಣ ಸಂದೇಶ ರವಾನಿಸಬೇಕು.ಬೆಳಗಾವಿ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಬೇಕು ಎಂದು ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷ ಅಯೂಬ ಪೀರಜಾದೆ ಆಗ್ರಹಿಸಿದ್ದಾರೆ.