ಪ್ರಖ್ಯಾತ ತೆಲುಗು ಖಳನಟ ಜಯಪ್ರಕಾಶ್ ರೆಡ್ಡಿ ಹೃದಯಘಾತದಿಂದ ನಿಧನ
ಗುಂಟೂರು, ಸೆಪ್ಟೆಂಬರ್ 8: ಪ್ರಸಿದ್ದ ತೆಲುಗು ನಟ ಟಿ.ಜಯಪ್ರಕಾಶ್ ರೆಡ್ಡಿ ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರಿಗೆ 74 ವರ್ಷ ವಯಸ್ಸಾಗಿದ್ದು, ಪತ್ನಿ ರಾಜ್ಯಲಕ್ಷ್ಮೀ ಮತ್ತು ಪುತ್ರ ಚಂದ್ರಪ್ರತಾಪ್ ರೆಡ್ಡಿಯನ್ನು ಅಗಲಿದ್ದಾರೆ.
ಇವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಾಯಲಸೀಮೆ ಭಾಷೆಯ ವಿಲನ್ ಪಾತ್ರದಲ್ಲಿ ರೆಡ್ಡಿ ಲಕ್ಷಾಂತರ ಜನರ ಮನಗೆದ್ದಿದ್ದಾರೆ. ಇವರು ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ಮಹೇಶ್ ಬಾಬು, ಜೂ. ಎನ್ಟಿಆರ್, ಪ್ರಭಾಸ್ ಮತ್ತು ರವಿತೇಜ ಸೇರಿದಂತೆ ಅನೇಕ ತೆಲುಗು ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ರೆಡ್ಡಿ ಅವರು ವಿಲನ್ ಆಗಿ ನಟಿಸಿದ್ದ 'ಸಮರಸಿಂಹ ರೆಡ್ಡಿ' ಚಿತ್ರ ಪ್ರಖ್ಯಾತಿ ತಂದುಕೊಟ್ಟಿತ್ತು.
ರೆಡ್ಡಿ 1988 ರಲ್ಲಿ ‘ಬ್ರಹ್ಮಪುತ್ರುಡು’ ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2020 ರ ಜನವರಿಯಲ್ಲಿ ಬಿಡುಗಡೆಯಾದ ಮಹೇಶ್ ಬಾಬು ಅವರೊಂದಿಗೆ ಬ್ಲಾಕ್ಬಸ್ಟರ್ ಚಿತ್ರ ‘ಸರಿಲೆರು ನಿ ಕೆವ್ವರು’ ನಲ್ಲಿ ನಟಿಸಿದ್ದರು.
ಅವರು ತಮ್ಮ ಸಮರಸಿಂಹ ರೆಡ್ಡಿ ಚಿತ್ರದ ಉತ್ತಮ ಖಳನಟನೆಗಾಗಿ 'ನಂದಿ ಪ್ರಶಸ್ತಿ' ಗಳಿಸಿದ್ದರು.