ಮನರಂಜನೆ

ಆಂಧ್ರಪ್ರದೇಶ : ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆ

ಆಂಧ್ರಪ್ರದೇಶ : ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆ

ಹೈದರಾಬಾದ್‍, ಸೆಪ್ಟೆಂಬರ್ 09: ಜನಪ್ರಿಯ ಟಿವಿ ಧಾರಾವಾಹಿ ಮೌನ ರಾಗಂ ಖ್ಯಾತಿಯ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮುತ್ತಿನ ನಗರಿಯ ಮಧುರಾನಗರ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ. 

ಬಾತ್‌ರೂಂನ ಸೀಲಿಂಗ್ ಫ್ಯಾನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಶವವಾಗಿ ಪತ್ತೆಯಾಗಿದ್ದಾಳೆ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಏತನ್ಮಧ್ಯೆ, ಗೆಳೆಯ ದೇವರಾಜ್ ರೆಡ್ಡಿ ಕಿರುಕುಳ ನೀಡುವುದರಿಂದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶ್ರಾವಣಿಯ ಕುಟುಂಬ ಆರೋಪಿಸಿದ್ದು,  ದೇವರಾಜ್ ವಿರುದ್ಧ ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ಮೂಲದ ದೇವರಾಜ್ ಅವರು ಶ್ರಾವಣಿಗೆ ಕಳೆದ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ನಟಿ ಕುಟುಂಬಸ್ಥರ ಆರೋಪವಾಗಿದೆ.

ಶ್ರಾವಣಿ ಕಳೆದ 8 ವರ್ಷಗಳಿಂದ ತೆಲುಗು ಟಿವಿ ಉದ್ಯಮದಲ್ಲಿ ಸಕ್ರಿಯರಾಗಿದ್ದರು. ಜನಪ್ರಿಯ ತೆಲುಗು ಧಾರಾವಾಹಿಗಳಾದ ಮನಸು ಮಮತಾ ಮತ್ತು ಮೌನರಾಗಂ ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು . ನಟಿಯ ಅಕಾಲಿಕ ಮರಣದಿಂದ ಕಿರುತೆರೆಗೆ ಆಘಾತವುಂಟಾಗಿದೆ.

 ಶ್ರಾವಣಿ ಆತ್ಮಹತ್ಯೆಗೆ ದೇವರಾಜ ರೆಡ್ಡಿ ಕಾರಣವೋ ಅಥವಾ ಬೇರೆ ಏನಾದರು ಕಾರಣ ಇರಬಹುದೇ ಎಂದು ಪೋಲೀಸರ ತನಿಖೆಯ ಬಳಿಕ ಗೊತ್ತಾಗಲಿದೆ.  “ಆಕೆ ಉತ್ತಮ ನಟಿ.  ಎಲ್ಲರೊಡನೆ ಬೆರೆಯುತ್ತಿದ್ದರು.  ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಜೀವ ಕಳೆದುಕೊಂಡಿರುವುದು ವಿಷಾದನೀಯ” ಎಂದು ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ