ತಾಂತ್ರಿಕ ತರಬೇತಿ ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಶ್ರೀ ಮಹಾವೀರ ಉಪಾದ್ಯೆ
ಧಾರವಾಡ 29: ಪ್ರಮಾಣ ಪತ್ರಗಳು ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಪಡೆದುಕೊಂಡ ಅಂಕಗಳ ವಿವರಣೆ ಮಾತ್ರ, ಆದರೆ, ಅಂಕಪಟ್ಟಿಯಿಂದ ವಿದ್ಯಾರ್ಥಿಗಳ ಕೌಶಲ್ಯವನ್ನು ಅಳೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಾಂತ್ರಿಕ ತರಬೇತಿಯನ್ನು ಪಡೆಯುವದರಿಂದ ಅವರಲ್ಲಿ ವೃತ್ತಿ ಕೌಶಲ್ಯದೊಂದಿಗೆ ಅವರ ವ್ಯಕ್ತಿತ್ವ ವಿಕಸನ ಹೊಂದುತ್ತದೆ ಎಂದು ಪ್ರಾಚಾರ್ಯರಾದ ಮಹಾವೀರ ಉಪಾದ್ಯೆಯವರು ಹೇಳಿದರು
ಅವರು ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಆಯೋಜಿಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಈಗಾಗಲೇ ಜೆ.ಎಸ್.ಎಸ್ ಐ.ಟಿ.ಐ ನಲ್ಲಿ ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಕಲಿಯುತ್ತಿರುವಗಲೇ ಗಳಿಕೆ ಆಧಾರದ ಮೇಲೆ ಆರ್ಥಿಕ ಸಹಾಯವನ್ನು ಸಹ ವಿದ್ಯಾರ್ಥಿಗಳಿಗೆ ಮಾಡಲಾಗಿದೆ. ತಾಂತ್ರಿಕ ತರಬೇತಿಯ ನಂತರ ವಿದ್ಯಾರ್ಥಿಗಳನ್ನು ವಿವಿಧ ಕೈಗಾರಿಕೆಗಳಲ್ಲಿ ಆಹ್ವಾನಿಸಲ್ಪಡುವ ಅಪ್ರೆಂಟೈಸ್ಶಿಪ್ ತರಬೇತಿಯನ್ನು ಪಡೆದುಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಕೈಗಾರಿಕೆಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು, ಸಮಯ ಪ್ರಜ್ಞೆ, ಶಿಸ್ತು, ಬ್ಯಾಂಕಿನ ವ್ಯವಹಾರಗಳು, ವ್ಯಾಪಾರದ ಮಾಹಿತಿಯನ್ನು ಕಲಿಯಬಹುದು. ಅಪ್ರೆಂಟೈಸ್ಶಿಪ್ ನಂತರ ಆ ವಿದ್ಯಾರ್ಥಿ ತನ್ನದೇ ಆದ ಸ್ವ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವಷ್ಟು ಸಮರ್ಥನಾಗುತ್ತಾನೆ ಹಾಗೂ ಆತನ ಅನುಭವ ಅವನಿಗೆ ಹೊಸ ಉದ್ಯೋಗಕ್ಕೆ ಬಡ್ತಿ ಹೊಂದಲು ಅನುಕೂಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಐ.ಟಿ.ಐ ಪಾಸಾದ ನಂತರ ಸಮಯವನ್ನು ವ್ಯರ್ಥಮಾಡದೇ ನಿಮ್ಮನ್ನು ಯಾವುದಾದರು ತರಬೇತಿ, ಉದ್ಯೋಗ ಅಥವಾ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿನಾಯಕ ಗವಳಿ ಕಾಯಕ್ರಮ ನಿರೂಪಿಸಿದರು, ಚಂದ್ರಶೇಖರ ಬಡಿಗೇರ ವಂದಿಸಿದರು, ಮಹೇಶ ಬಡಿಗೇರ, ವಿದ್ಯಾ ಹಿರೇಮಠ, ಜೋಯೇಲ್ ಯೊಹಾನ್, ಲತಾ.ಸಿ, ಮಂಜುನಾಥ ಚಟ್ಟೇರ ಉಪಸ್ಥಿತರಿದ್ದರು.