ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬುತ್ತಿರುವ ಕ್ಷೇತ್ರ ಸಮನ್ವಯಾಧಿಕಾರಿ ಬಂಡಗರ
ಇಂಡಿ 20: ತಾಲೂಕಿನಲ್ಲಿ ಕೋವಿಡ್-19ನಿಂದ ಸಾಕಷ್ಟು ಶಿಕ್ಷಕರು ಸಾವನ್ನಪ್ಪಿದ್ದರಿಂದ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗರ ವೀಡಿಯೋ ಸಂದೇಶದ ಮೂಲಕ ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.
ಇಂಡಿ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ ಬಂಡಗರ ಶಿಕ್ಷಕರ ಸಾವು ಸಂಭವಿಸುತ್ತಿರುವುದರಿಂದ ಕಳವಳ ವ್ಯಕ್ತಪಡಿಸಿ ಶಿಕ್ಷಕರ ವಾಟ್ಸಪ್ ಗ್ರುಪ್ಗಳಿಗೆ ತಾವು ಮಾತನಾಡಿದ ವೀಡಿಯೋ ಸಂದೇಶವನ್ನು ಹರಿಬಿಟ್ಟು, ಶಿಕ್ಷಕರಿಗೆ ಧೈರ್ಯ ತುಂಬುತ್ತಿದ್ದಾರೆ.
ಪ್ರಜ್ಞಾವಂಂತರಾದ ಶಿಕ್ಷಕರೇ ಜನರಿಗೆ ಜಾಗೃತಿ ಮೂಡಿಸಬೇಕು. ಆದರೆ ಶಿಕ್ಷಕರು ತಮಗೆ ಕೋವಿಡ್ ಲಕ್ಷಣಗಳು ಕಂಡು ಬಂದ ಕೂಡಲೆ ಎದೆ ಒಡೆದುಕೊಳ್ಳುತ್ತಿದ್ದಾರೆ. ನಮ್ಮ ಮುಂದೆಯೇ ಸಾಕಷ್ಟು ಜನ ಗುಣಮುಖರಾಗಿ ಬಂದಿದ್ದಾರೆ. ಅಂತಹವರಿಗೆ ಫೋನ್ ಮಾಡಿ ಅವರಿಗಾದ ಅನುಭವದ ಬಗ್ಗೆ ತಿಳಿದುಕೊಳ್ಳಿ, ಆಸ್ಪತ್ರೆಯಲ್ಲಿ ಯಾವ ರೀತಿ ಓಷಧೋಪಚಾರ ಮಾಡುತ್ತಾರೆ? ಕೋವಿಡ್ ಪಾಜಿಟಿವ್ ಆದರೆ ನಾವು ಯಾವ ಆಹಾರ ಸೇವಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ಕೋವಿಡ್ನಿಂದ ಗುಣಮುಖರಾಗಿ ಬಂದವರಿಂದ ಕೇಳಿ ತಿಳಿದುಕೊಂಡು ಧೈರ್ಯ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಬಹಳಷ್ಟು ಶಿಕ್ಷಕರು ತಮಗೆ ಕೋವಿಡ್ ಲಕ್ಷಣ ಕಂಡು ಬಂದರೂ ಮನೆಯಲ್ಲೂ ಯಾರಿಗೂ ಹೇಳದೆ ಗೆಳೆಯರ ಮುಂದೆಯೂ ಹೇಳದೆ, ಸುಮ್ಮನಿದ್ದು ಬಿಡುತ್ತಿದ್ದಾರೆ. ಹೀಗಾಗಿಯೇ ಶಿಕ್ಷಕರು ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ಲಕ್ಷಣ ಕಂಡು ಬಂದರೆ ಮನೆಯವರ ಮುಂದೆ, ಗೆಳೆಯರ ಮುಂದೆ ಹೇಳಿಕೊಳ್ಳಿ, ಕೂಡಲೆ ಆಸ್ಪತ್ರೆಗೆ ಹೋಗಿ ಕೋವಿಡ್ ತಪಾಸಣೆ ಮಾಡಿಕೊಳ್ಳಿ. ಕೋವಿಡ್ ಇದ್ದರೆ ವೈದ್ಯರ ಸಲಹೆ ಪಡೆಯಿರಿ ಎಂದು ತಿಳಿಸಿದ್ದಾರೆ.
ನನಗೂ 2020 ರ ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್ ಪಾಜಿಟಿವ್ ಆಗಿತ್ತು. ನಾನೂ ಸಹ ಎದೆ ಒಡೆದುಕೊಂಡಿದ್ದೆ. ನನ್ನ ಸ್ನೇಹಿತ ವಿಜು ರಾಠೋಡ ಅವರಿಗೂ ನನಗಿಂತಲೂ ಮೊದಲೆ ಕೋವಿಡ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಕೂಡಲೆ ನಾನು ಅವರನ್ನು ಸಂಪರ್ಕಿಸಿದೆ. ಆತ ನಾನಿರುವಲ್ಲೇ ಬಂದ, ಏನಾಗಲ್ಲ ಸರ್ ಇದೇನು ದೊಡ್ಡ ರೋಗವಲ್ಲ ಎರಡ್ಮೂರು ದಿನದಲ್ಲಿ ಕಿಮೆಯಾಗುತ್ತದೆ ಎಂದು ಹೇಳಿ, ತಾನು ಚಿಕಿತ್ಸೆ ಪಡೆದುಕೊಂಡಿದ್ದ ವೇದಾಂತ ಆಸ್ಪತ್ರೆಗೆ ನನ್ನನ್ನೂ ದಾಖಲಿಸಿದರು. ವೈದ್ಯರು ರಕ್ತ ತಪಾಸಣೆ ಮಾಡಿ ಸ್ವಲ್ಪ ಪ್ರಮಾಣದಲ್ಲಿ ಕೊರೋನಾ ಇದೆ ಎಂದು ತಿಳಿಸಿ ಎರಡು ದಿನ ಅಲ್ಲೇ ಅಡ್ಮಿಟ್ ಮಾಡಿಕೊಂಡರು. ಗುಣಮುಖನಾದೆ. ಮನೆಗೆ ಬಂದ ನಂತರ ಬಿಸೀನೀರಿನ ಉಗ ತೆಗೆದುಕೊಳ್ಳುವುದು ಪ್ರತೀ ದಿನ ಎರಡ್ಮೂರು ಬಾರಿ ಕಷಾಯ ಸೇವಿಸುವುದು, ಬಿಸಿ-ಬಿಸಿಯಾದ ಅಡುಗೆ ಊಟ ಮಾಡುವುದು ಮಾಡಿದೆ. ಒಂದು ವಾರದಲ್ಲಿ ಸಂಪೂರ್ಣ ಗುಣಮುಖನಾಗಿ ಮತ್ತೆ ನಾನು ನನ್ನ ಸೇವೆಗೆ ಹಾಜರಾಗಿ ಕಾರ್ಯ ನಿರ್ವಹಿಸಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕೋವಿಡ್ ಆದ ಶಿಕ್ಷಕರು ಅಥವಾ ಲಕ್ಷಣಗಳಿರುವ ಶಿಕ್ಷಕರು ನನ್ನ ಗಮನಕ್ಕೆ ತನ್ನಿ ಕೋವಿಡ್ನಿಂದ ಗುಣಮುಖವಾದ ಅನುಭವ ಹಂಚಿಕೊಳ್ಳುತ್ತೇನೆ. ಧೈರ್ಯ ಒಂದಿದ್ದರೆ ಕೊರೋನಾ ದೂರ ಓಡುತ್ತದೆ ಎಂದು ಸಮನ್ವಯಾಧಿಕಾರಿಗಳು ಶಿಕ್ಷಕರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.
ಸಿ.ಎಂ. ಬಂಡಗರ ಸಂಪರ್ಕ ಸಂಖ್ಯೆ 9880143324.