ಶಿಕ್ಷಕರು ಕೇವಲ ಪಠ್ಯ ಬೋಧಕರಾಗದೇ, ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಶಿಲ್ಪಿಗಳಾಗಬೇಕು
ಕೊಲ್ಹಾರ 02: ಶಿಕ್ಷಕರು ಕೇವಲ ಪಠ್ಯ ಬೋಧಕರಾಗದೇ, ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಶಿಲ್ಪಿಗಳಾಗಬೇಕು. ಆಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಹೇಳಿದರು.ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಮುಖ್ಯಶಿಕ್ಷಕ ಐ.ಎಂ. ಬಾಟಿ ಅವರ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಅವಟಿ ಮಾತನಾಡಿ, ಮುಖ್ಯಶಿಕ್ಷಕ ಐ.ಎಂ. ಬಾಟಿ ಅವರ ಶಿಸ್ತು, ಕಾರ್ಯನಿಷ್ಠೆ ಹಾಗೂ ಮಗು-ಪಾಲಕ-ಶಿಕ್ಷಕರ ಸಮನ್ವಯದ ಫಲವಾಗಿ ಶಾಲೆ ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐ.ಎಂ. ಬಾಟಿ, ಸರ್ಕಾರಿ ನೌಕರರು ಕರ್ತವ್ಯಪ್ರಜ್ಞೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಸದಸ್ಯೆ ಲಕ್ಷ್ಮೀಬಾಯಿ ಜಿಡ್ಡಿಬಾಗಿಲು, ಮುಖ್ಯಾಧಿಕಾರಿ ವಿರೇಶ ಹಟ್ಟಿ, ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನೀಲಕಂಠನಾಥ ಸಜ್ಜನ, ಶಿಕ್ಷಣ ಸಂಯೋಜಕ ವಿ.ಎಚ್. ಪುರೋಹಿತ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎನ್. ತಡಲಗಿ ಹಾಗೂ ಎಸ್.ಎಸ್. ಜಂಗಮಶೆಟ್ಟಿ, ಆನಂದ ಪವಾರ, ದಾನಿ ಪ್ರಾಣೇಶ್ ಪತ್ತಾರ, ಎಸ್ಡಿಎಂಸಿ ಉಪಾಧ್ಯಕ್ಷ ಪುಂಡಲೀಕ ಬೆಳ್ಳುಬ್ಬಿ, ಸದಸ್ಯರಾದ ಹೊನ್ನಪ್ಪ ಹಡಪದ, ಲಕ್ಷ್ಮಣ ಕುಂಬಾರ ಸೇರಿದಂತೆ ಪಾಲಕರು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.