ಧಾರವಾಡ - ಹುಬ್ಬಳ್ಳಿ

ಶಿಕ್ಷಕರು ಅರಿತು ಕಲಿಸಲು ರೂಢಿಸಿಕೊಳ್ಳಬೇಕು:ಅರ್ಜುನ ಕಂಬೋಗಿ

ಶಿಕ್ಷಕರು ಅರಿತು ಕಲಿಸಲು ರೂಢಿಸಿಕೊಳ್ಳಬೇಕು:ಅರ್ಜುನ ಕಂಬೋಗಿ

ಧಾರವಾಡ  16: ಪ್ರಾಥಮಿಕ ಇಲ್ಲವೇ ಪ್ರೌಢ ಶಾಲೆಗಳ ಯಾವುದೇ ತರಗತಿಗಳಲ್ಲಿ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಶಿಕ್ಷಕರು ಅರಿತು ಕಲಿಸಲು ರೂಢಿಸಿಕೊಳ್ಳಬೇಕೆಂದು ಡಯಟ್ ಹಿರಿಯ ಉಪನ್ಯಾಸಕ ಅರ್ಜುನ ಕಂಬೋಗಿ ಸಲಹೆ ನೀಡಿದರು. 

ಅವರು ತಾಲೂಕಿನ ಮರೇವಾಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ಪಠ್ಯಾಧಾರರಿತ ಶಿಕ್ಷಕರ ಚಿಂತನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಕರು ನಿತ್ಯವೂ ತಮ್ಮ ಬೋಧನಾ ವಿಷಯಗಳನ್ನು ಅಧ್ಯಯನ ಮಾಡಬೇಕು. ಯಾವುದೇ ತರಗತಿ ಇದ್ದರೂ ಸಹ ಅಗತ್ಯ ಸಿದ್ಧತೆಗಳಿಲ್ಲದೇ ಶಿಕ್ಷಕ-ಶಿಕ್ಷಕಿಯರು ತರಗತಿ ಪ್ರವೇಶಿಸಬಾರದು ಎಂದರು.  

ಪಾಠದ ಟಿಪ್ಪಣೆ : ನಿತ್ಯವೂ ಪಾಠದ ಟಿಪ್ಪಣೆ ಬರೆಯುವ ಉದ್ದೇಶದ ಹಿಂದೆ ಶಿಕ್ಷಕರು ಅರಿತು ಕಲಿಸಬೇಕೆಂಬ ವಿಸ್ತೃತ ಆಶಯವೇ ಅಡಗಿದೆ. ನಾಳೆ ತರಗತಿಗಳಲ್ಲಿ ಬೋಧಿಸಬೇಕಾದ ವಿಷಯಗಳನ್ನು ಮೆಲಕು ಹಾಕಿ ಅದರ ಬೋಧನಾ ಅಂಶಗಳನ್ನು ಪಾಠದ ಟಿಪ್ಪಣೆಯಲ್ಲಿ ದಾಖಲಿಸುವುದರಿಂದ ಬೋಧನೆಯು ಕ್ರಿಯಾಪ್ರೇರಕಗೊಂಡು ವಿದ್ಯಾರ್ಥಿಗಳಲ್ಲಿ ಕಲಿವಿನಫಲ ಸಂವರ್ಧನೆಯಾಗುತ್ತದೆ ಎಂದರು. 

ಕಾಲಕಾಲಕ್ಕೆ ಬದಲಾದ ಶಿಕ್ಷಣ ನೀತಿ ಮತ್ತು ಪಠ್ಯಕ್ರಮ ಚೌಕಟ್ಟು ಒಳಗೊಳ್ಳಬೇಕಾದ ನಿರ್ದಿಷ್ಟಾಂಶಗಳನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ನಿರ್ದೇಶಿಸುತ್ತಿದ್ದು, ಇವುಗಳನ್ನು ಅಧ್ಯಯನಕ್ಕೆ ಸ್ವೀಕರಿಸುವುದರ ಜೊತೆಗೆ ಶಿಕ್ಷಕ-ಶಿಕ್ಷಕಿಯರು ನಿತ್ಯವೂ ಪಠ್ಯಪೂರಕ ಸಾಹಿತ್ಯದ ಅಧ್ಯಯನಕ್ಕೆ ತೆರೆದುಕೊಳ್ಳಬೇಕೆಂದು ಅರ್ಜುನ ಕಂಬೋಗಿ ಮಾರ್ಗದರ್ಶನ ಮಾಡಿದರು.  

ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಸವರಾಜ ಕುರಗುಂದ ಶಿಕ್ಷಕರ ಚಿಂತನಾ ಸಭೆಯ ಆಶಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಶಿವಾನಂದ ಹೂಗಾರ ಸ್ವಾಗತಿಸಿದರು. ಮರೇವಾಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಆತ್ಮಾನಂದ ಕೆಂಪೂರ ನಿರೂಪಿಸಿದರು. ತಿಮ್ಮಾಪೂರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಎಸ್‌.ಎ. ಜಾಧವ ವಂದಿಸಿದರು. ಕ್ಲಸ್ಟರಿನ ವಿವಿಧ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.  


ಸುದ್ದಿ ಓದಿ