ಕೆಡಿಪಿ ಸಭೆ ಕರೆಯದಿದ್ದುದಕ್ಕೆ ತಾಲೂಕು ಅಧಿಕಾರಿಗಳಿಗೆ ಜಿಡ್ಡು ಹಿಡಿದಿದೆ
ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿಕೆ: ತಾಲೂಕಾ ಪ್ರಗತಿ ಪರೀಶೀಲನೆ ಸಭೆ
ಅಥಣಿ 30: ಅಥಣಿ ತಾಲೂಕು ಹೆಡ್ ಮಾಸ್ಟರ್ ಇಲ್ಲದ ಶಾಲೆಯಂತಾಗಿದ್ದು, ಪ್ರಮುಖವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಹಿಂದಿನ ಶಾಸಕರು ಕೆಡಿಪಿ ಸಭೆ ಕರೆದು ಪ್ರಗತಿ ಪರೀಶೀಲನೆ ಮಾಡದೇ ಇದ್ದುದಕ್ಕೆ ತಾಲೂಕಿನಲ್ಲಿ ಅಧಿಕಾರಿಗಳಿಗೆ ಜಿಡ್ಡು ಹಿಡಿದಿದೆ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಆಯೋಜಿಸಿದ್ದ ಪ್ರಗತಿ ಪರೀಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೆಡಿಪಿ ಅಧ್ಯಕ್ಷರಾಗಿ ಸ್ಥಳೀಯ ಶಾಸಕರು ಇರುತ್ತಾರೆ ಇವರು ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆದು ಪ್ರತಿ ಇಲಾಖೆಯ ಪ್ರಗತಿ ಪರೀಶೀಲನೆ ಮಾಡಬೇಕು ಆದರೆ ನಾನು ಈ ಮೊದಲು ವಿಧಾನ ಪರಿಷತ್ ಸದಸ್ಯನಾಗಿ 4 ವರ್ಷಗಳ ಅವಧಿಯಲ್ಲಿ ಒಂದು ಬಾರಿಯೂ ಕೂಡ ಕೆಡಿಪಿ ಸಭೆ ನಡೆದಿರುವ ಮಾಹಿತಿ ಬಂದಿಲ್ಲ ನನಗೆ ಮಾಹಿತಿ ನೀಡದೇ ಕೆಡಿಪಿ ಸಭೆ ನಡೆಸಿದ್ದರೂ ಕೂಡ ದಾಖಲೆ ಸಹಿತ ಮಾಹಿತಿ ನೀಡಿ ಎಂದು ತಾಲೂಕಾ ಪಂಚಾಯತ ಅಧಿಕಾರಿ ವೀರಣ್ಣಾ ವಾಲಿಯವರಿಗೆ ಲಕ್ಷ್ಮಣ ಸವದಿ ಸೂಚಿಸಿದರು.
ಸಾರ್ವಜನಿಕರೊಂದಿಗೆ, ರೈತರೊಂದಿಗೆ ಸರಿಯಾಗಿ ವ್ಯವಹರಿಸಿ ಮತ್ತು ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ ಲಕ್ಚ್ಮಣ ಸವದಿ ಮಲ್ಟಿ ವ್ಹಿಲೇಜ್ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಹೀಗಾಗಿ ತೆಲಸಂಗ ಸೇರಿದಂತೆ ಅನೇಕ ಗ್ರಾಮಗಳಿಗೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಬೇಸಿಗೆ ಅವಧಿಯಲ್ಲಿ ನೀರು ಪೂರೈಕೆಗೆ ಅಡತಡೆ ಆಗಬಾರದು. ಕುಡಿಯುವ ನೀರು ಪೂರೈಕೆಯಲ್ಲಿ ಅಡತಡೆ ಆಗದಂತೆ ನೋಡಿಕೊಳ್ಳಬೇಕು ಇಲ್ಲದೇ ಹೋದಲ್ಲಿ ಸಮರ್ಥರಿಗೆ ಬಿಟ್ಟುಕೊಡಿ ಎಂದು ಕುಡಿಯುವ ನೀರು ವಿಭಾಗದ ರವೀಂದ್ರ ಮೂರ್ಗಾಲಿ ಇವರಿಗೆ ಶಾಸಕ ಲಕ್ಷ್ಮಣ ಸವದಿ ಸೂಚಿಸಿದರು.
ತೆಲಸಂಗ, ಐಗಳಿ, ಕಕಮರಿ, ಯಲ್ಲಮ್ಮವಾಡಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ನಿರಂತರವಾಗಿ ತೊಂದರೆಯಾಗುತ್ತಿದ್ದು, ರೈತರೊಂದಿಗೆ ಸರಿಯಾಗಿ ಉತ್ತರಿಸದ ತೆಲಸಂಗನ ಉಮೇಶ ಪಾಂಗಿ ಹಾಗೂ ಮಂಜುನಾಥ ಲಮಾಣಿ ಇವರನ್ನು ತಕ್ಷಣದಿಂದ ಸೇವೆಯಿಂದ ಮುಕ್ತಗೊಳಿಸಿ ಬೇರೆಯವರನ್ನು ನೇಮಕ ಮಾಡಿ ಎಂದು ಕಾರ್ಯನಿರ್ವಾಹಕ ಅಭಿಯಂತರರಿಗೆ ಆದೇಶಿಸಿದರು.
ಮುಂಬರುವ ಜೂನ್ 10 ರಂದು ಕರಿ ಮಸೂತಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಲು ತಯಾರಿ ಮಾಡಿಕೊಳ್ಳಬೇಕು ಎಂದು ಶಾಸಕ ಲಕ್ಷ್ಮಣ ಸವದಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ನೀರಾವರಿ ಇಲಾಖೆಯಲ್ಲಿ ಸಾಕಷ್ಟು ಭೋಗಸ್ ಬಿಲ್ಲ ಪಾಸ ಮಾಡಿರುವ ಮಾಹಿತಿ ನನ್ನ ಬಳಿ ಇದೆ. ಈ ಬಗ್ಗೆ ನೀವೇ ನನಗೆ ಸರಿಯಾದ ಮಾಹಿತಿ ನೀಡಿ ಇಲ್ಲದೇ ಹೋದಲ್ಲಿ ಅನಿವಾರ್ಯವಾಗಿ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಥಣಿ ಮತ್ತು ಕಾಗವಾಡ ಮತಕ್ಷೇತ್ರದಲ್ಲಿ ವೃದ್ಧಾಪ್ಯ ಮತ್ತು ಅಂಗವಿಕಲ ಪಿಂಚಣಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ಅನರ್ಹ ಫಲಾನುಭವಿಗಳು ಪಡೆಯುತ್ತಿದ್ದು, ಇದರ ಬಗೆಗೆ ಸೂಕ್ತ ತನಿಖೆ ನಡೆಯಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಇಬ್ಬರೂ ತಹಶಿಲ್ದಾರರಿಗೆ ಆದೇಶಿಸಿದರು. ಆದರೆ ಇದಕ್ಕೆ ಸರಿಯಾಗಿ ಸ್ಪಂದಿಸದ ಕಾಗವಾಡ ಮತ್ತು ಅಥಣಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಲಕ್ಷ್ಮಣ ಸವದಿ ಬರೀ ತನಿಖೆಯಲ್ಲ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಂದ ಪಿಂಚಣಿ ಹಣವನ್ನು ರಿಕವರಿ ಮಾಡಿ ಎಂದು ಸೂಚಿಸಿದರು.
ವೇದಿಕೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ, ಅಥಣಿ ತಹಶಿಲ್ದಾರ ಕಟಕಭಾವಿ, ಕಾಗವಾಡ ತಹಶಿಲ್ದಾರ ಹಾಗೂ ಕಾಗವಾಡ ತಾ.ಪಂ ಅಧಿಕಾರಿ ಉಪಸ್ಥಿತರಿದ್ದರು.