ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು: ಉಪ ಲೋಕಾಯುಕ್ತ ಬಿ.ವೀರಪ್ಪ
ಬೆಳಗಾವಿ, ಅ.30: ಭ್ರಷ್ಟಾಚಾರವನ್ನು ಕೇವಲ ಲೋಕಾಯುಕ್ತ ಸಂಸ್ಥೆಯಿಂದ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರೂ ಭ್ರಷ್ಟಾಚಾರ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕರೆ ನೀಡಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶುಕ್ರವಾರ ಬೆಳಗಾವಿ ಮತ್ತು ಬೈಲಹೊಂಗಲ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಭ್ರಷ್ಟಾಚಾರ ಎಂಬ ಪಿಡುಗನ್ನು ನಾವೇ ಬೆಳೆಸಿಕೊಂಡು ಬಂದಿದ್ದೇವೆ. ಅದನ್ನು ತೊಲಗಿಸಲು ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು. ಭ್ರಷ್ಟಾಚಾರದಲ್ಲಿ ತೊಡಗುವವರನ್ನು ಸಮಾಜ ಹಾಗೂ ಕುಟುಂಬದವರು ಬಹಿಷ್ಕರಿಸಬೇಕು. ಇದೇ ಭ್ರಷ್ಟಾಚಾರ ನಿರ್ಮೂಲನೆಗೆ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದರು.
ಶಾಸಕಾಂಗ ಮತ್ತು ಕಾರ್ಯಾಂಗಗಳು ವಿಫಲವಾಗುತ್ತಿರುವ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನ್ಯಾಯಾಂಗ ಹಾಗೂ ನಾಲ್ಕನೇ ಅಂಗವೆಂದೇ ಕರೆಯಲಾಗುವ ಪತ್ರಿಕಾರಂಗವೂ ಅಶಕ್ತವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಸಮಾಜದಲ್ಲಿ ಅನ್ಯಾಯ ನಡೆದಾಗ ನ್ಯಾಯಾಂಗ ಮತ್ತು ಪತ್ರಿಕಾರಂಗ ಧ್ವನಿ ಎತ್ತುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಿವೆ ಎಂದರು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ನಿಷ್ಪಕ್ಷಪಾತ ತನಿಖೆ ಮತ್ತು ಕಾರ್ಯಾಚರಣೆಗಳ ಮೂಲಕ ದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಆದರೂ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವುದು ಸವಾಲಿನ ಕೆಲಸವಾಗಿದೆ. ವಿದ್ಯಾವಂತ ಮೋಸಗಾರರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಮಾಜದ ವರ್ತನೆಯೂ ಕಾರಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಹಣ ಪಡೆದು ಮತ ಚಲಾಯಿಸುವ ಪ್ರವೃತ್ತಿ ಸಮಾಜದ ಅಧೋಗತಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಬದಲಾವಣೆ ಬಂದಾಗ ಮಾತ್ರ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯ. ಸ್ವಾರ್ಥವನ್ನು ಬದಿಗಿಟ್ಟು ಭ್ರಷ್ಟಾಚಾರವನ್ನು ತೊಲಗಿಸಿದರೆ ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಲಿದೆ. ಭ್ರಷ್ಟಾಚಾರದಲ್ಲಿ ಸ್ಪರ್ಧೆ ಏರ್ಪಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರಕೃತಿಯೂ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಇದನ್ನು ಅರಿತು ಪ್ರತಿಯೊಬ್ಬರೂ ಬದಲಾಗಬೇಕು ಎಂದು ಕರೆ ನೀಡಿದರು.
ರಾಷ್ಟ್ರಕವಿ ಕುವೆಂಪು ಅವರ ಸಮಪಾಲು, ಸಮಬಾಳು ಆಶಯದಂತೆ ಹಾಗೂ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಸ್ವಾತಂತ್ರ್ಯ ಬಂದು ಎಂಟು ದಶಕಗಳಾದರೂ ಸಂವಿಧಾನಬದ್ಧ ಹಕ್ಕುಗಳು ಇನ್ನೂ ಎಲ್ಲರಿಗೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಹಕ್ಕುಗಳಿಗಾಗಿ ಹೋರಾಡುವ ನಾವು ಕರ್ತವ್ಯಗಳ ನಿರ್ವಹಣೆಯಲ್ಲಿ ನಿರಾಸಕ್ತಿ ತೋರುತ್ತಿರುವುದು ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿದೆ. ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡುವವರೇ ಮತ್ತೊಂದೆಡೆ ಭ್ರಷ್ಟಾಚಾರದಲ್ಲಿ ತೊಡಗುತ್ತಿರುವುದು ವಿಷಾದನೀಯ ಎಂದರು.
ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಸೈನಿಕರು ಹಗಲಿರುಳು ಶ್ರಮಿಸಿ ದೇಶದ ರಕ್ಷಣೆ ಮಾಡುತ್ತಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತರೂ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಗೆ ನಾವೆಲ್ಲರೂ ಹೊಣೆಗಾರರಾಗಿದ್ದೇವೆ ಎಂದು ಹೇಳಿದರು.
ಮಾಜಿ ಸೈನಿಕರಿಗೆ ನಿವೇಶನ ಒದಗಿಸಲು ಸರಕಾರದ ಆದೇಶ
ಲೋಕಾಯುಕ್ತ ಸಂಸ್ಥೆಯ ನಿರಂತರ ಪ್ರಯತ್ನದ ಫಲವಾಗಿ ಮಾಜಿ ಸೈನಿಕರು ಹಾಗೂ ಅವರ ವಾರಸುದಾರರಿಗೆ ಆಯಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನಿವೇಶನ ಒದಗಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸುಮಾರು ಒಂದೂವರೆ ವರ್ಷಗಳ ಸತತ ಪ್ರಯತ್ನದ ಬಳಿಕ ಈ ಆದೇಶ ಹೊರಬಿದ್ದಿದ್ದು, ನಿವೇಶನಗಳನ್ನು ಗುರುತಿಸಿ ಫಲಾನುಭವಿಗಳಿಗೆ ವಿತರಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಸುಳ್ಳು ದೂರು ಸಲ್ಲಿಸುವವರಿಗೆ ಜೈಲು ಶಿಕ್ಷೆಯ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಸುಳ್ಳು ಪ್ರಕರಣಗಳು ಮತ್ತು ಮೂಕರ್ಜಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನೈಜ ಪ್ರಕರಣಗಳ ವಿಚಾರಣೆ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರೆಂದು ಹೇಳಿಕೊಂಡು ಅಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ದೂರುದಾರರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತ ಸಂಸ್ಥೆ ಕಠಿಣ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕ (ವಿಚಾರಣೆ) ಅರವಿಂದ, ಬೆಳಗಾವಿ ಡಿಎಫ್ಒ ಕ್ರಾಂತಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಸ್ವಾಗತಿಸಿದರು. ಬೆಳಗಾವಿ ಹಾಗೂ ಬೈಲಹೊಂಗಲ ಉಪ ವಿಭಾಗಗಳ ವ್ಯಾಪ್ತಿಯ ದೂರುದಾರರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.