2011ರ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ಸಕ್ರಮಗೊಳಿಸಿದ್ದ ಕರ್ನಾಟಕದ ಕಾಯ್ದೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಬೆಂಗಳೂರು/ನವದೆಹಲಿ, ಅ.30 : ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳಿಂದ ವಿವಾದಕ್ಕೀಡಾಗಿದ್ದ 2011ರ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯನ್ನು ಸಕ್ರಮಗೊಳಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ 2022ರ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ನ್ಯಾಯಾಂಗದ ತೀರ್ಪುಗಳನ್ನು ನಂತರದ ಶಾಸನಗಳ ಮೂಲಕ ರದ್ದುಗೊಳಿಸಲು ಅಥವಾ ನಿಷ್ಪ್ರಭಗೊಳಿಸಲು ಶಾಸಕಾಂಗಕ್ಕೆ ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು, ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚ್ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಮತ್ತು ನೇಮಕಾತಿ ಸಕ್ರಮಗೊಳಿಸುವಿಕೆ) ಕಾಯ್ದೆ-2022 ಅನ್ನು ಅಸಂವಿಧಾನಿಕ ಎಂದು ಘೋಷಿಸಿದೆ.
ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪುಗಳನ್ನು ರಾಜ್ಯ ಶಾಸಕಾಂಗವು ಕಾಯ್ದೆಯ ಮೂಲಕ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಕಾಯ್ದೆಯಡಿ ಮಾಡಲಾಗಿದ್ದ ನೇಮಕಾತಿಗಳಿಗೆ ಅಂತ್ಯ ಹಾಡಿರುವ ನ್ಯಾಯಾಲಯ, ಅಸ್ತಿತ್ವದಲ್ಲಿರುವ ನೇಮಕಾತಿ ನಿಯಮಗಳ ಅನ್ವಯ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಶಾಸಕಾಂಗದ ಅಧಿಕಾರದ ಮಿತಿಗಳನ್ನು ವಿವರಿಸಿದ ನ್ಯಾಯಪೀಠ, ನ್ಯಾಯಾಂಗದ ತೀರ್ಪಿಗೆ ಆಧಾರವಾಗಿರುವ ಕಾನೂನಿನ ಅಂಶಗಳನ್ನು ಶಾಸಕಾಂಗವು ಪೂರ್ವಾನ್ವಯವಾಗಿ ಬದಲಾಯಿಸಬಹುದಾದರೂ, ನಂತರದ ಕಾಯ್ದೆಯ ಮೂಲಕ ಅಂತಿಮ ನ್ಯಾಯಾಂಗ ತೀರ್ಪನ್ನೇ ನೇರವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ವಿವಾದವು 2011ರ ನವೆಂಬರ್ನಲ್ಲಿ ಆರಂಭವಾಗಿತ್ತು. ಅಂದು ಕರ್ನಾಟಕ ಸರ್ಕಾರವು 362 ಗ್ರೂಪ್ ಎ ಮತ್ತು ಗ್ರೂಪ್ ಬಿ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ನೇಮಕಾತಿಗೆ 1.38 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 1,090 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು.
ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರವು 2013ರಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ತಡೆಹಿಡಿದು, ಅಪರಾಧ ತನಿಖಾ ದಳದ (ಸಿಐಡಿ) ತನಿಖೆಗೆ ಆದೇಶಿಸಿತ್ತು. ತನಿಖೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧಿಕಾರಿಗಳು ಸೇರಿದಂತೆ ಹಲವರಿಂದ ವ್ಯಾಪಕ ಅಕ್ರಮ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ನಡೆದಿರುವುದು ಬೆಳಕಿಗೆ ಬಂದಿತ್ತು ಎಂದು ವರದಿಯಾಗಿತ್ತು.
ಇದರ ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿತ್ತು. ಈ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ನಂತರ ಸುಪ್ರೀಂ ಕೋರ್ಟ್ ಕೂಡ ಅದನ್ನು ಸಮರ್ಥಿಸಿತ್ತು.
ಆದರೆ, ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2022ರಲ್ಲಿ ನೇಮಕಾತಿಯನ್ನು ಸಕ್ರಮಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಶಾಸನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಅಂತಿಮವಾಗಿ ಸುಪ್ರೀಂ ಕೋರ್ಟ್ನ ವಿಚಾರಣೆಗೆ ಬಂದಿತ್ತು.
ವೈಯಕ್ತಿಕವಾಗಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂಬ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಇಡೀ ಆಯ್ಕೆ ಪ್ರಕ್ರಿಯೆಯೇ ದೋಷಪೂರಿತವಾಗಿದ್ದು, ಅದನ್ನು ಭಾಗಶಃ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಸಾಂವಿಧಾನಿಕ ನ್ಯಾಯಾಲಯಗಳು ಈಗಾಗಲೇ ಕಳಂಕಿತ ಎಂದು ಘೋಷಿಸಿರುವ ನೇಮಕಾತಿ ಪ್ರಕ್ರಿಯೆಯಿಂದ ಉಂಟಾದ ನೇಮಕಾತಿಗಳಿಗೆ ಸಮಾನತೆಯ ಆಧಾರದ ಮೇಲೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ವಿಭಿನ್ನ ನಿಲುವುಗಳನ್ನು ತಳೆದಿರುವುದನ್ನೂ ನ್ಯಾಯಪೀಠ ಪ್ರಶ್ನಿಸಿದೆ. ಗಂಭೀರ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ತಾನೇ ರದ್ದುಗೊಳಿಸಿದ್ದ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಸರ್ಕಾರ ಪ್ರಯತ್ನಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಮೂಲ ನೇಮಕಾತಿ ಪ್ರಕ್ರಿಯೆ ನಡೆದು ಸುಮಾರು 15 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಹಳೆಯ ಆಯ್ಕೆ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲು ನ್ಯಾಯಾಲಯ ನಿರಾಕರಿಸಿದೆ.
ಆದರೆ, 2011ರ ನೇಮಕಾತಿಯಲ್ಲಿ ಅಕ್ರಮದಲ್ಲಿ ಭಾಗಿಯಾಗದ ಅರ್ಹ ಅಭ್ಯರ್ಥಿಗಳು, ಆರು ಮೇಲ್ಮನವಿದಾರರು ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಕೆಎಟಿ) ವಿಚಾರಣೆ ಬಾಕಿ ಇರುವ ಪ್ರಕರಣಗಳ ಅರ್ಜಿದಾರರಿಗೆ ಒಂದು ಬಾರಿಯ ವಯೋಮಿತಿ ಸಡಿಲಿಕೆ ನೀಡಿದೆ. ಇವರು ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಇತರ ಅರ್ಹ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ.
ಹೊಸ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹೊಸದಾಗಿ ನೇಮಕಗೊಂಡ ದಿನಾಂಕದಿಂದ ಮಾತ್ರ ಸೇವಾ ಹಿರಿತನ ಅನ್ವಯವಾಗಲಿದೆ. ಮಧ್ಯಂತರ ಅವಧಿಗೆ ಹಿಂಬಾಕಿ ವೇತನ ಅಥವಾ ಕಾಲ್ಪನಿಕ ನೇಮಕಾತಿಯ ಪ್ರಯೋಜನಗಳು ದೊರೆಯುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆದರೆ, ಹೊಸ ನೇಮಕಾತಿಯಲ್ಲಿ ಆಯ್ಕೆಯಾದರೆ, ಅವರ ಹಿಂದಿನ ಸೇವಾವಧಿಯನ್ನು ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಈ ಮೂಲಕ ಮೇಲ್ಮನವಿಗಳನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, 2022ರ ಕಾಯ್ದೆ ಹಾಗೂ ಪ್ರಶ್ನಿಸಲಾಗಿದ್ದ ಹೈಕೋರ್ಟ್ ಆದೇಶಗಳನ್ನು ರದ್ದುಗೊಳಿಸಿದೆ.