ರಾಜ್ಯ

ರಾಜಸ್ಥಾನದ ಶಿಲಾ ಪರಂಪರೆ ಅನ್ವೇಷಿಸಲು ಫ್ರೆಂಚ್ ಕಲಾವಿದರಿಗೆ ಸ್ಟೋನ್‌ಎಕ್ಸ್ ಆಹ್ವಾನ

ರಾಜಸ್ಥಾನದ ಶಿಲಾ ಪರಂಪರೆ ಅನ್ವೇಷಿಸಲು ಫ್ರೆಂಚ್ ಕಲಾವಿದರಿಗೆ ಸ್ಟೋನ್‌ಎಕ್ಸ್ ಆಹ್ವಾನ

ಬೆಂಗಳೂರು, ಅ.30 : ರಾಜಸ್ಥಾನದ ಶ್ರೀಮಂತ ಶಿಲಾ ಪರಂಪರೆ ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಯನ್ನು ಅಂತರರಾಷ್ಟ್ರೀಯ ಕಲಾ ವೇದಿಕೆಗೆ ಪರಿಚಯಿಸುವ ಉದ್ದೇಶದಿಂದ ಸ್ಟೋನ್‌ಎಕ್ಸ್ ಗ್ಲೋಬಲ್, ಫ್ರೆಂಚ್ ಇನ್‌ಸ್ಟಿಟ್ಯೂಟ್ ಇನ್ ಇಂಡಿಯಾ (ಐಎಫ್‌ಐ) ಮತ್ತು ವಿಲ್ಲಾ ಸ್ವಾಗತಂ ಸಹಯೋಗದಲ್ಲಿ ರಾಜಸ್ಥಾನದ ಕಿಶನ್‌ಗಢದಲ್ಲಿ ಮೂರು ವರ್ಷಗಳ ಕಲಾವಿದರ ವಸತಿ ಕಾರ್ಯಕ್ರಮವನ್ನು ಆರಂಭಿಸಿದೆ.

ಈ ಕಾರ್ಯಕ್ರಮದಡಿ ಫ್ರೆಂಚ್ ಕಲಾವಿದರು ಕಿಶನ್‌ಗಢಕ್ಕೆ ಭೇಟಿ ನೀಡಿ ಅಲ್ಲಿನ ಭೌಗೋಳಿಕ ಪರಂಪರೆ, ಶಿಲಾ ಸಂಪತ್ತು, ಸಾಂಪ್ರದಾಯಿಕ ಕರಕುಶಲ ಕಲೆ ಹಾಗೂ ಕುಶಲಕರ್ಮಿಗಳ ಸಮುದಾಯದೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲಿದ್ದಾರೆ. ಸ್ಥಳೀಯ ವಸ್ತುಗಳು ಮತ್ತು ಸಾಂಪ್ರದಾಯಿಕ ಜ್ಞಾನವು ಸಮಕಾಲೀನ ಕಲಾತ್ಮಕ ಅಭಿವ್ಯಕ್ತಿಗೆ ಹೇಗೆ ಸ್ಫೂರ್ತಿಯಾಗಬಹುದು ಎಂಬುದನ್ನು ಅನ್ವೇಷಿಸಲಿದ್ದಾರೆ.

ಫ್ರೆಂಚ್ ಶಿಲ್ಪಿ ಹಾಗೂ ಬಹುಶಿಸ್ತೀಯ ಕಲಾವಿದ ವಿನ್ಸೆಂಟ್ ವೊಯಿಲಟ್ ಮತ್ತು ಕಲಾವಿದೆ-ವಿನ್ಯಾಸಕಿ ಸೋಫಿಯಾ ಟೈಲೆಟ್ ಅವರನ್ನು ಮೊದಲ 42 ದಿನಗಳ ವಸತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮ ಅಕ್ಟೋಬರ್ 25ರಿಂದ ಡಿಸೆಂಬರ್ 5ರವರೆಗೆ ನಡೆಯಲಿದೆ. ಇವರ ಕಲಾಕೃತಿಗಳನ್ನು ಡಿಸೆಂಬರ್ 4ರಿಂದ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆಯಲಿರುವ ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸುವ 'ಇಂಡಿಯಾ ಆರ್ಟ್, ಆರ್ಕಿಟೆಕ್ಚರ್ ಆ್ಯಂಡ್ ಡಿಸೈನ್ ಬೈನಾಲೆ (ಐಎಎಡಿಬಿ) 2026'ರಲ್ಲಿ ಪ್ರದರ್ಶಿಸಲಾಗುತ್ತದೆ.

ಅಂತರರಾಷ್ಟ್ರೀಯ ಕಲಾತ್ಮಕ ಅಭ್ಯಾಸಗಳು ಮತ್ತು ಸ್ಥಳೀಯ ವಸ್ತುಜ್ಞಾನವನ್ನು ಒಂದೆಡೆ ಸೇರಿಸುವ ಮೂಲಕ ಕಿಶನ್‌ಗಢವನ್ನು ಸೃಜನಶೀಲ ವಿನಿಮಯದ ಕೇಂದ್ರವನ್ನಾಗಿ ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ಥಳೀಯ ಕುಶಲಕರ್ಮಿಗಳೊಂದಿಗೆ ನೇರ ಸಂವಾದದ ಮೂಲಕ ಕರಕುಶಲ ಕಲೆ, ಸಾಂಸ್ಕೃತಿಕ ನೆನಪುಗಳು, ಭೌಗೋಳಿಕ ಪರಿಸರ ಮತ್ತು ಸಮಕಾಲೀನ ವಿನ್ಯಾಸಗಳ ನಡುವಿನ ಸಂಬಂಧವನ್ನು ಅನ್ವೇಷಿಸಲಾಗುತ್ತದೆ.

ವಿನ್ಸೆಂಟ್ ವೊಯಿಲಟ್ ಅವರ ಕಲಾತ್ಮಕ ಕಾರ್ಯಕ್ಷೇತ್ರವು ಭೌಗೋಳಿಕ ರಚನೆಗಳು, ಬಂಡೆಗಳ ಮಾದರಿಗಳು ಮತ್ತು ಪುರಾತತ್ವ ಪದರಗಳನ್ನು ಆಧರಿಸಿದೆ. ಪ್ರದೇಶ, ಅಲ್ಲಿನ ನಿವಾಸಿಗಳು ಹಾಗೂ ಸಾಮೂಹಿಕ ನೆನಪುಗಳ ನಡುವಿನ ಸಂಬಂಧವನ್ನು ಅವರು ತಮ್ಮ ಕಲಾಕೃತಿಗಳ ಮೂಲಕ ಅನಾವರಣಗೊಳಿಸುತ್ತಾರೆ. ಕಿಶನ್‌ಗಢದ ಶಿಲಾ ಪರಿಸರವು ಕಲ್ಲನ್ನು ಕೇವಲ ಕೈಗಾರಿಕಾ ಮತ್ತು ವಾಣಿಜ್ಯ ವಸ್ತುವಾಗಿ ನೋಡದೆ, ಅದರ ವಿಶಾಲವಾದ ಸಾಂಸ್ಕೃತಿಕ ಮಹತ್ವವನ್ನು ಅರಿಯಲು ಅವರಿಗೆ ಅವಕಾಶ ಕಲ್ಪಿಸಲಿದೆ.

ಕಲೆ, ವಿನ್ಯಾಸ ಮತ್ತು ಕರಕುಶಲ ಕ್ಷೇತ್ರಗಳ ಸಂಗಮದಲ್ಲಿ ಕಾರ್ಯನಿರ್ವಹಿಸುವ ಸೋಫಿಯಾ ಟೈಲೆಟ್, ಚಲನೆ ಮತ್ತು ದೈಹಿಕ ಭಂಗಿಗಳನ್ನು ವಸ್ತುರೂಪಕ್ಕೆ ಪರಿವರ್ತಿಸುವ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಕುಶಲಕರ್ಮಿಗಳು, ಕಾರ್ಯಾಗಾರಗಳು, ನೃತ್ಯಗಾರರು ಮತ್ತು ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡುತ್ತಾರೆ. ಪ್ಯಾಲೇ ದೆ ಟೋಕಿಯೊ, ಫೊಂಡೇಶನ್ ಪೆರ್ನಾಡ್ ರಿಕಾರ್ಡ್ ಮತ್ತು ಮ್ಯೂಸೇ ದೆ ಲಾ ಶಾಸ್ ಎ ದೆ ಲಾ ನೇಚರ್ ಸೇರಿದಂತೆ ಹಲವು ಪ್ರತಿಷ್ಠಿತ ಕಲಾ ಸಂಸ್ಥೆಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಫ್ರೆಂಚ್ ಇನ್‌ಸ್ಟಿಟ್ಯೂಟ್ ಇನ್ ಇಂಡಿಯಾದ ನಿರ್ದೇಶಕ ಗ್ರೆಗರ್ ಟ್ರುಮೆಲ್ ಮಾತನಾಡಿ, ಈ ಸಹಯೋಗವು ವಸ್ತುಸಂಪತ್ತು, ಕರಕುಶಲ ಕಲೆ ಮತ್ತು ಭೌಗೋಳಿಕ ಗುರುತನ್ನು ಸಾಂಸ್ಕೃತಿಕ ವಿನಿಮಯದ ಕೇಂದ್ರಬಿಂದುವಾಗಿಸುವ ಮೂಲಕ ವಿಲ್ಲಾ ಸ್ವಾಗತಂ ಜಾಲಕ್ಕೆ ವಿಶಿಷ್ಟ ಆಯಾಮ ನೀಡಲಿದೆ ಎಂದರು.

ಕಿಶನ್‌ಗಢವು ತನ್ನ ನೈಸರ್ಗಿಕ ಪರಿಸರ, ಕುಶಲಕರ್ಮಿಗಳು ಮತ್ತು ಜೀವಂತ ಸಂಪ್ರದಾಯಗಳ ಮೂಲಕ ಫ್ರೆಂಚ್ ಕಲಾವಿದರಿಗೆ ರಾಜಸ್ಥಾನವನ್ನು ಅರಿಯಲು ಅತ್ಯುತ್ತಮ ವೇದಿಕೆಯಾಗಲಿದೆ. ಇದರೊಂದಿಗೆ ತಮ್ಮದೇ ಆದ ಕಲಾತ್ಮಕ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಅವರಿಗೆ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.

ಸ್ಟೋನ್‌ಎಕ್ಸ್ ಗ್ಲೋಬಲ್ ಗ್ರೂಪ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಸುಶಾಂತ್ ಪಾಠಕ್ ಮಾತನಾಡಿ, ಈ ವಸತಿ ಕಾರ್ಯಕ್ರಮವು ಕಿಶನ್‌ಗಢದಲ್ಲಿರುವ 'ದಿ ಗಿಲ್ಡ್' ಪರಿಕಲ್ಪನೆಯ ವಿಸ್ತರಣೆಯಾಗಿದೆ. ಕಲ್ಲು, ಕರಕುಶಲ ಕಲೆ, ಜ್ಞಾನ ಮತ್ತು ನೈಪುಣ್ಯದ ಕುರಿತಾದ ಕಂಪನಿಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದರು.

ಕಿಶನ್‌ಗಢವನ್ನು ಕೇವಲ ಶಿಲಾ ಉದ್ಯಮದ ಕೇಂದ್ರವಾಗಿ ನೋಡದೆ, ವಸ್ತುಜ್ಞಾನ, ಕರಕುಶಲ ಕಲೆ ಮತ್ತು ಸಂಸ್ಕೃತಿಯ ಜೀವಂತ ಪರಿಸರ ವ್ಯವಸ್ಥೆಯಾಗಿ ಅನುಭವಿಸಲು ಈ ಕಾರ್ಯಕ್ರಮ ಕಲಾವಿದರಿಗೆ ಅವಕಾಶ ಕಲ್ಪಿಸಲಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದ ಆಯ್ಕೆ ಸಮಿತಿಯ ಸದಸ್ಯೆ ಹಾಗೂ ಸಮುದಾಯ ಮತ್ತು ಕರಕುಶಲ ಪರಂಪರೆಯ ಪೋಷಕರಾಗಿರುವ ಕಿಶನ್‌ಗಢದ ರಾಜಕುಮಾರಿ ವೈಷ್ಣವಿ ಕುಮಾರಿ ಮಾತನಾಡಿ, ಈ ಕಾರ್ಯಕ್ರಮವು ಪ್ರಾದೇಶಿಕ ಕಲಾ ಸಂಪ್ರದಾಯಗಳನ್ನು ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಸಮಕಾಲೀನ ಕಲಾ ಅಭ್ಯಾಸಗಳೊಂದಿಗೆ ಬೆಸೆಯಲಿದೆ ಎಂದರು.

ಇಂತಹ ಸಾಂಸ್ಕೃತಿಕ ವಿನಿಮಯವು ಕಲಾವಿದರು ಮತ್ತು ಕುಶಲಕರ್ಮಿಗಳಿಬ್ಬರಿಗೂ ಹೊಸ ಅನುಭವಗಳನ್ನು ನೀಡುವುದರ ಜೊತೆಗೆ ಕಿಶನ್‌ಗಢದ ಕಲಾ ಪರಂಪರೆ ಮತ್ತು ಜೀವಂತ ಸಂಪ್ರದಾಯಗಳತ್ತ ಹೊಸ ಗಮನ ಸೆಳೆಯಲಿದೆ ಎಂದು ಅವರು ಹೇಳಿದರು.

ಆಯ್ಕೆ ಸಮಿತಿಯಲ್ಲಿ ಸ್ಟೋನ್‌ಎಕ್ಸ್ ಆರ್ಟ್‌ನ ನಿರ್ದೇಶಕಿ ಶ್ವೇತಾ ಅಗರ್ವಾಲ್, ಶಿಲ್ಪಿ ಶಾಂತಮಣಿ ಮುದ್ದಯ್ಯ, ಸ್ಟೋನ್‌ಎಕ್ಸ್ ಗ್ಲೋಬಲ್‌ನ ಸೃಜನಶೀಲ ನಿರ್ದೇಶಕ ಡ್ಯಾರೆನ್ ವಾಟ್ಸನ್ ಮತ್ತು ಫ್ರಾನ್ಸ್‌ನ ಮಾಜಿ ಸಾಂಸ್ಕೃತಿಕ ಅಟ್ಯಾಚೆ ಅಮಾಂಡಿನ್ ರೋಜ್‌ಮನ್ ಕೂಡ ಇದ್ದರು.

ಫ್ರೆಂಚ್ ಇನ್‌ಸ್ಟಿಟ್ಯೂಟ್ ಇನ್ ಇಂಡಿಯಾ ಮತ್ತು ಫ್ರಾನ್ಸ್ ರಾಯಭಾರ ಕಚೇರಿಯು 2023ರ ಮಾರ್ಚ್‌ನಲ್ಲಿ ವಿಲ್ಲಾ ಸ್ವಾಗತಂ ಕಾರ್ಯಕ್ರಮವನ್ನು ಆರಂಭಿಸಿವೆ. ಇದು ಫ್ರಾನ್ಸ್ ಮತ್ತು ದಕ್ಷಿಣ ಏಷ್ಯಾದಾದ್ಯಂತ ಸುಮಾರು 30 ವಸತಿ ಕಾರ್ಯಕ್ರಮದ ಪಾಲುದಾರರ ಜಾಲವನ್ನು ಹೊಂದಿದ್ದು, ಕಲಾವಿದರು, ಬರಹಗಾರರು ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರ ನಡುವೆ ಸಹಯೋಗಕ್ಕೆ ಅವಕಾಶ ಕಲ್ಪಿಸುತ್ತಿದೆ.

2003ರಲ್ಲಿ ಸ್ಥಾಪನೆಯಾದ ಸ್ಟೋನ್‌ಎಕ್ಸ್ ಗ್ಲೋಬಲ್ ನೈಸರ್ಗಿಕ ಶಿಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಿಶನ್‌ಗಢದಲ್ಲಿರುವ 'ದಿ ಗಿಲ್ಡ್' ಸಂಸ್ಥೆಯು ಸಂಶೋಧನೆ, ಸಂಸ್ಕರಣೆ ಮತ್ತು ಕರಕುಶಲ ನೈಪುಣ್ಯದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.


ಸುದ್ದಿ ಓದಿ