ತಾಲೂಕಾ ಆಡಳಿತ ಕಾರ್ಯ ಶಿಸ್ತುಬದ್ಧ : ಪಟ್ಟಣ ಸಂಪೂರ್ಣ ಸ್ತಬ್ಧ
ಗುಳೇದಗುಡ್ಡ 24: ಕೋವಿಡ್ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸಲು ಸರ್ಕಾರ ಕರ್್ಯೂ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ತಾಲೂಕಾ ಆಡಳಿತ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದ ಶನಿವಾರ ಪಟ್ಟಣದ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಿದ್ದವು. ಜನ ಬೀದಿಗೆ ಬರದೇ ರಸ್ತೆಗಳು ಬಿಕೋ ಎನ್ನುವಂತಿದ್ದವು.
ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲು, ಹಣ್ಣು, ತರಕಾರಿ ಅಂಗಡಿಗಳು ಬೆಳಗ್ಗೆ 10 ಗಂಟೆಯವರಗೆ ಮಾತ್ರ ತೆರೆದಿದ್ದು ನಂತರ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಮುಚ್ಚಿದ್ದರು.
ತಾಲೂಕು ಆಡಳಿತ ಕಟ್ಟುನಿಟ್ಟಿನ ಸೂಕ್ತ ಕ್ರಮ ತೆಗೆದುಕೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನರು ಬೆಳಿಗ್ಗೆ 10 ರ ನಂತರ ಮನೆ ಬಿಟ್ಟು ಹೊರ ಬರಲಿಲ್ಲ. ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಬೈಕ್ಗಳು ರಸ್ತೆ ಮೇಲೆ ಕಂಡು ಬರುತ್ತಿದ್ದವು. ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ ಅವರ ನೇತೃತ್ವದಲ್ಲಿ ಕೋವಿಡ್ ಮಾರ್ಗಸೂಚಿ ಅನುಷ್ಠಾನ ತಂಡಗಳ ಉತ್ತಮ ಕಾರ್ಯನಿರ್ವಹಣೆಯಿಂದ ಹಾಗೂ ಪೊಲೀಸ್ ಇಲಾಖೆಯವರ ಕಾರ್ಯದಕ್ಷತೆಯಿಂದ ಪಟ್ಟಣದಲ್ಲಿ ಸ್ತಬ್ಧ ವಾತಾವರಣ ಕಂಡುಬಂದಿತು.
ತಾಲೂಕಿನ ತೆಗ್ಗಿ ಹಾಗೂ ಪರ್ವತಿ ಗ್ರಾಮಗಳಲ್ಲಿ ಶನಿವಾರ ಜರುಗಿದ ಎರಡು ವಿವಾಹಗಗಳಿಗೆ ತಾಲೂಕಾ ದಂಡಾಧಿಕಾರಿಗಳಾಗಿರುವ ತಹಸೀಲ್ದಾರ ಜಿ.ಎಂ.ಕುಲಕರ್ಣಿ ಹಾಗೂ ಪಿಎಸೈ ಪಿ.ಎಂ.ಪಟಾತರ ಅವರ ತಂಡ ಭೇಟಿ ನೀಡಿ ಕೋವಿಡ್ ನಿಯಮ ಪಾಲನೆ ಆಗಿರುವ ಬಗ್ಗೆ ಖುದ್ದಾಗಿ ವೀಕ್ಷಣೆ ಮಾಡಿದರು. ಗ್ರಾಮಗಳ ವಿವಾಹ ಕಾರ್ಯಕ್ರಮಗಳಲ್ಲಿ ಜನರು ಕೋವಿಡ್ ನಿಯಮ ಪಾಲನೆ ಮಾಡಿದ್ದಾರೆ ಎಂದು ತಹಸೀಲ್ದಾರ್ ಜಿ.ಎಂ.ಕುಲಕರ್ಣಿ ಹಾಗೂ ಪಿಎಸೈ ಪಿ.ಎಂ.ಪಟಾತರ ತಿಳಿಸಿದ್ದಾರೆ.
ಶನಿವಾರದ ಕರ್್ಯೂ ಸರ್ಕಾರದ ಮಾರ್ಗಸೂಚಿಯಂತೆ ಪಟ್ಟಣದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ರಸ್ತೆಗೆ ಬರದೇ ನಿಯಮ ಪಾಲಿಸಿ ಸಹಕರಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ ತಿಳಿಸಿದರು.