ಸೆ. 30 ರಂದು ತಲ್ಲೂರ ರಾಯನಗೌಡ ಪಾಟೀಲ ದತ್ತಿ ಕಾರ್ಯಕ್ರಮ
ಧಾರವಾಡ 29: ಕರ್ನಾಟಕ ವಿದ್ಯಾವರ್ಧಕ ಸಂಘವು, ತಲ್ಲೂರ ರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆಯ ದತ್ತಿ ಅಂಗವಾಗಿ ದಿ. ಸೆ. 30 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ತಲ್ಲೂರು ರಾಯನಗೌಡರು ನಡೆದು ಬಂದ ದಾರಿ’ ಉಪನ್ಯಾಸ ಕಾರ್ಯಕ್ರಮ ಏರಿ್ಡಸಿದೆ.
ಮುರಗೋಡ ಶ್ರೀ ಮಹಾಂತೇಶ್ವರ ಪ.ಪೂ. ಕಾಲೇಜಿನ ವಿಶ್ರಾಂತ ಉಪನ್ಯಾಸಕ ಪ್ರೊ. ಎನ್.ಬಿ. ಮಲಕಣ್ಣವರ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು.
ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ತಲ್ಲೂರ ರಾಯನಗೌಡ ಪಾಟೀಲರ ಕುರಿತು
‘ಮನೆ ನಿಮ್ಮದು ಸೇವೆ ನಮ್ಮದು’ ಎಂಬ ನಾಮಫಲಕವನ್ನು ಮನೆಯ ಬಾಗಿಲಿಗೆ ನೇತು ಹಾಕಿ ಜನಸೇವೆಯಲ್ಲಿಯೇ ಜೀವನ ಸಾರ್ಥಕಪಡಿಸಿಕೊಂಡ ಅಪರೂಪದ ವ್ಯಕ್ತಿತ್ವ ಲಿಂಗೈಕ್ಯ ಶ್ರೀ ರಾಯನಗೌಡ ಪಾಟೀಲರದು. ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟು ಬದುಕನ್ನೇ ಅರ್ಿಸಿದ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರ.
ಸವದತ್ತಿ ತಾಲೂಕಿನ ತಲ್ಲೂರಿನಲ್ಲಿ 28 ಫೆಬ್ರುವರಿ 1910 ರಂದು ತಂದೆ ಲಿಂಗನಗೌಡ, ತಾಯಿ ಬಸಮ್ಮನವರ ಮಗನಾಗಿ ಜನಿಸಿದರು. ಕಾಲೇಜಿನ ದಿನಗಳಲ್ಲಿಯೇ ಸಾಹಿತ್ಯಾಸಕ್ತಿ, ಹೋರಾಟ, ಸಮಾಜ ಸೇವೆಯ ದೀಕ್ಷೆ ತೊಟ್ಟ ಇವರು ಹಲವಾರು ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಯನ್ನು ಗೈದಿರುವ ಧೀಮಂತ ನಾಯಕರು.
ಸ್ವಾತಂತ್ರ್ಯ ಹೋರಾಟದಲ್ಲಿ ಹಿಂಡಲಗಾ ಹಾಗೂ ಪುಣೆಯಲ್ಲಿ ಜೈಲು ಶಿಕ್ಷೆ ಅನುಭವಿಸಿದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಇತಿಹಾಸ, ಪರಂಪರೆ, ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದ ಇವರು 1946 ರಲ್ಲಿ ಬೈಲಹೊಂಗಲದಲ್ಲಿ ರಾಣಿ ಚೆನ್ನಮ್ಮ ಇತಿಹಾಸ ಮಂಡಳವನ್ನು ಸ್ಥಾಪಿಸಿದರು. ಶರಣ ಸಂಸ್ಕೃತಿಯಲ್ಲಿ ಅಪಾರ ಭಕ್ತಿ ಹೊಂದಿದ್ದರು. ಕನಕದಾಸರ, ಸಂತ ಶಿಶುನಾಳ ಶರೀಫರ ಆಳವಾದ ಸಂಶೋಧನೆಯನ್ನು ಕೈಗೊಂಡು ವಿದ್ವತ್ ಪೂರ್ಣ ಸಂಗತಿಗಳನ್ನು ಸಾಹಿತ್ಯದ ಮೂಲಕ ನೀಡಿರುವರು. ‘ಮಲ್ಲಸರ್ಜ ಕಾವ್ಯ’, ‘ಕಿತ್ತೂರ ಬಂಡಾಯ’ ಕಾವ್ಯಗಳನ್ನು ಸಂಪಾದಿಸಿರುವ ಇವರು, ನೂರಾರು ಲೇಖನಗಳನ್ನು, ಅಮೂಲ್ಯವಾದ ಗ್ರಂಥಗಳನ್ನು ಸಾರಸ್ವತ ಲೋಕಕ್ಕೆ ಅರ್ಿಸಿರುವರು.
ಗೌಡರದು ಬಹುಮುಖ ವ್ಯಕ್ತಿತ್ವ. ಉತ್ತಮ ವಾಗ್ಮಿ, ವಿಚಾರವಾದಿ, ಸಂಘಟನಾಕಾರ, ಸಾಹಿತಿ, ಸಂಶೋಧಕ, ಇತಿಹಾಸತಜ್ಞ, ಜನಪದ ಕಲೆಗಾರ, ಶಿಕ್ಷಣತಜ್ಞ, ಪ್ರವಾಸಿಗ, ಸರ್ವಧರ್ಮ ಸಹಿಷ್ಣು, ಸಮಾಜ ಸೇವಕ, ಸಮಾನತೆಯ ಪ್ರತಿಪಾದಕ, ಕುಶಲ ಕರ್ಮಿಗಳ ಹಿತಚಿಂತಕ. ಭವ್ಯ ಭಾರತದ ಉಜ್ವಲ ಕನಸುಗಾರ, ನಿಸ್ವಾರ್ಥ ಜನಾನುರಾಗಿ ನಾಯಕ. ನಡೆ-ನುಡಿಗಳಿಂದ ಆದರ್ಶ ವ್ಯಕ್ತಿತ್ವ ಲಿಂಗೈಕ್ಯ ಶ್ರೀ ರಾಯನಗೌಡ ಪಾಟೀಲರದು.
ಧಣಿವರಿಯದ ಇವರು 30 ಸಪ್ಟಂಬರ್ 1982 ರಲ್ಲಿ ಲಿಂಗೈಕ್ಯರಾದರು. ಬದುಕನ್ನು ಪ್ರೀತಿಸಿದ ಬದುಕಿಗೆ ಅರ್ಥ ತುಂಬಿದ ಈ ಪುಣ್ಯ ಪುರಷ ನಡೆದ ಹಾದಿಯನ್ನೊಮ್ಮೆ ತಿರುಗಿ ನೋಡಿ ಚೈತನ್ಯ, ಸ್ಪೂರ್ತಿ ಪಡೆದುಕೊಳ್ಳಲು. ಈ ಪುಣ್ಯಪುರಷರ ಸ್ಮರಣೆಗಾಗಿ 2009 ರಲ್ಲಿ ದತ್ತಿ ಇರಿಸಿದ್ದಾರೆ. ಸ್ಮರಿಸೋಣ ಬನ್ನಿ.