ಕಾಗವಾಡ

ಕೋವಿಡ್ ನಿಯಮ ಪಾಲಿಸದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ

ಕೋವಿಡ್ ನಿಯಮ ಪಾಲಿಸದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ
ಕಾಗವಾಡ ಪ್ರವಾಸಿ ಮಂದಿರದಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಸ

ಸಚಿವ ಶ್ರೀಮಂತ ಪಾಟೀಲ ಅಧಿಕಾರಿಗಳಿಗೆ ಸೂಚನೆ: ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ 

ಶೇಡಬಾಳ 23: ದೇಶ ಹಾಗೂ ರಾಜ್ಯದಲ್ಲಿ ಕೊರೋನಾ 2 ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರ ನೀಡುವ ಆದೇಶಗಳನ್ನು ಪಾಲಿಸದೇ ಇರುವವರ ಮೇಲೆ ನಿರ್ದಾಕ್ಷಣ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲರು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಅವರು ಶುಕ್ರವಾರ ದಿ. 23 ರಂದು ಕಾಗವಾಡ ಪ್ರವಾಸಿ ಮಂದಿರದಲ್ಲಿ ಕೊರೋನಾ 2 ನೇ ಅಲೆಯ ಹಾವಳಿಯ ಕುರಿತು ಕರೆಯಲಾಗಿದ್ದ ಅಥಣಿ ಹಾಗೂ ಕಾಗವಾಡ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಕಾಗವಾಡ ಮತ್ತು ಅಥಣಿ ತಾಲೂಕಿನಲ್ಲಿ ಕೊರೋನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  

ಮಾಸ್ಕ್‌ ಹಾಕದೇ ಸಂಚರಿಸುವವರ ಮೇಲೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುದೇ ಇರುವವರ ಹಾಗೂ ವಿನಾಕಾರಣ ಕೆಲಸವಿಲ್ಲದೇ ತಿರುಗಾಡುವವರ  ಮೇಲೆ, ಮದುವೆ ಸಮಾರಂಭದಲ್ಲಿ 50 ಜನರಿಗಿಂತ ಹೆಚ್ಚಿಗೆ ಕೂಡಿದ್ದಲ್ಲಿ ಮತ್ತು ಸರ್ಕಾರ ಜಾರಿಗೆ ತಂದಿರುವ 144 ಕಲಂ ಉಲ್ಲಂಘಿಸುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. 

ಕೊರೋನಾ ಹಾವಳಿಯನ್ನು ತಡೆಗಟ್ಟಬೇಕಾದರೆ ಮೇ 1 ರಿಂದ ಪ್ರಾರಂಭವಾಗಲಿರುವ 18 ರಿಂದ ಮೇಲ್ಪಟ್ಟ ಎಲ್ಲ ವಯಸ್ಸಿನವರು ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.  

ಚಿಕ್ಕೋಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎಸ್‌. ಗಡದೆ ಮಾತನಾಡಿ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಒಟ್ಟು 156 ಜನ ಕೊರೋನಾ ಪಾಸಿಟಿವ್ ಹೊಂದಿದವರು ಇದ್ದು, ಅದರಲ್ಲಿ ಅಥಣಿ ತಾಲೂಕಿನಲ್ಲಿ 106 ಜನ, ಕಾಗವಾಡ ತಾಲೂಕಿನಲ್ಲಿ 50 ಜನರಿದ್ದಾರೆ. ಅದರಲ್ಲಿ 140 ಜನರು ಹೋಂ ಕ್ವಾರೈಂಟೈನ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 8 ಜನ ಅಥಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾರೆ. 8 ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೆ ಅಥಣಿಯಲ್ಲಿ 50 ಬೆಡ್ ಹಾಗೂ ಕಾಗವಾಡದಲ್ಲಿ 20 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಓಷಧಿ, ಆಕ್ಸಿಜನ್ ಕೊರತೆ ಇಲ್ಲ ಎಂದು ಸಚಿವರಿಗೆ ವಿವರಿಸಿದರು. ಈಗಾಗಲೇ ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ 45 ಹಾಗೂ 60 ವರ್ಷ ಮೇಲ್ಪಟ್ಟ ಶೇ. 31 ರಷ್ಟು ಜನರಿಗೆ ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಲಾಗಿದೆ ಎಂದು ಹೇಳಿದರು.  

ಆಯಾ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೆ ತಾವು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಚಿವರಿಗೆ ವಿವರಿಸಿದರು.    

ಈ ಸಮಯದಲ್ಲಿ ಅಥಣಿ ತಹಶೀಲ್ದಾರ ದುಂಡಪ್ಪ ಕೋಮಾರ, ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ಚಿಕ್ಕೋಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎಸ್‌. ಗಡದೆ, ಅಥಣಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡ ಕಾಗೆ, ಕಾಗವಾಡ ತಾಲೂಕಾ ವೈದ್ಯಾಧಿಕಾರಿ  ಡಾ. ಪುಷ್ಪಲತಾ ಸುಣ್ಣದಕಲ್ಲ, ತಾಲೂಕಾ ಪಂಚಾಯತ ಮುಖ್ಯಾಧಿಕಾರಿ ವೀರನಗೌಡ ಏಗನಗೌಡರ, ಕಾಗವಾಡ ಪಿಎಸ್‌ಐ ಹಣಮಂತ ಧರ್ಮಟ್ಟಿ, ಅಥಣಿ ಪಿಎಸ್‌ಐ ಕುಮಾರ ಹಾಡಕರ, ಕಾಗವಾಡ ಬಿಇಓ ಎಂ.ಆರ್‌. ಮುಂಜೆ, ಕಾಗವಾಡ ಸಿಡಿಪಿಓ ಸಂಜೀವ ಸದಲಗಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.        


ಸುದ್ದಿ ಓದಿ