ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಿ: ಸದನದಲ್ಲಿ ಶಾಸಕ ಪಾಟೀಲ ಧ್ವನಿ
ಇಂಡಿ: ಗುತ್ತಿ ಬಸವಣ್ಣ ಏತನೀರಾವರಿ ಯೋಜನೆ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ತಾಂಬಾ ಗ್ರಾಮದಲ್ಲಿ ರೈತರು 188 ದಿನದಿಂದ ಹೋರಾಟ ನಡೆಸುತ್ತಿದ್ದು ಮಂಗಳವಾರ ಶಾಸಕ ಯಶವಂತ್ರಾಯಗೌಡ ಪಾಟೀಲ ಅಧಿವೇಶನದಲ್ಲಿ ರೈತಪರವಾಗಿ ಧ್ವನಿ ಎತ್ತಿದ್ದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ.
ಗುತ್ತಿ ಬಸವಣ್ಣ ಏತನೀರಾವರಿ ಕಿ.ಮೀ00ದಿಂದ 203 ರವರೆಗೆ ಕಾಲುವೆಯ ಕಾಮಗಾರಿ ಪೂರ್ನಗೊಂಡಿದೆ, ಆದರೆ ಸದರಿ ಕಾಲುವೆಯ 97.00 ಕಿ.ಮೀ ರವರೆಗೆ ಮಾತ್ರ ನೀರು ಹರಿಯುತ್ತಿದ್ದು ಕಾಲುವೆಯ ಮುಂದಿನ ಭಾಗದವರೆಗೆ ನೀರು ಹರಿಯುತ್ತಿಲ್ಲವಾದ್ದರಿಂದ ಜನ -ಜಾನುವಾರುಗಳು ತೊಂದರೆಯಾಗುತ್ತಿದೆ. ಕಾಲುವೆಯಲ್ಲಿ 97.00 ರಿಂದ 203 .00 ಕಿಮೀ ರವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಿ ಎಂದು ಶಾಸಕ ಪಾಟೀಲ ಒತ್ತಾಯಿಸಿದ್ದಾರೆ.
ಇಂಡಿ ಶಾಖಾ ಕಾಲುವೆಗೆ (ಐ.ಬಿ.ಸಿ) ಸ್ಕಾಡಾಗೇಟ್ ಅಳವಡಿಸಿರುವ ಮಾದರಿಯಲ್ಲಿ ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ಸ್ಕಾಡಾ ಗೇಟ್ ಅಳವಡಿಕೆ ಮಾಡಿ ನೀರು ಪೋಲಾಗದಂತೆ ಕ್ರಮವಹಿಸಿ ಕಾಲುವೆಯ ಕೊನೆಯವರೆಗೆ ಸಮರ್ಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸದನದಲ್ಲಿ ಧ್ವನಿ ಎತ್ತಿದ್ದಾರೆ.
ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗುತ್ತಿ ಬಸವಣ್ಣ ಏತನಿರಾವರಿ ಯೋಜನೆಗೆ ಸಂಬಂಧಿಸಿದ 8 ಪಂಪ್ಗಳು ಹಾಳಾಗಿದ್ದವು ಈಗಾಗಲೆ ನಾಲ್ಕು ಪಂಪ್ಗಳನ್ನು ರಿಪೇರಿ ಮಾಡಿ ಕಾರ್ಯಾರಂಭ ಮಾಡಲಾಗಿದ್ದು 0. ಕಿ. ಮೀ ದಿಂದ 97 ಕಿ.ಮೀ ವರೆಗೆ ನೀರು ಹರಿಸಲಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಇನ್ನುಳಿದ ನಾಲ್ಕು ಪಂಪ್ಗಳ ದುರಸ್ಥಿ ಕಾರ್ಯ ಮುಗಿಯಲಿದ್ದು ಆಗ 97 ಕಿ.ಮೀ ದಿಂದ ಮುಂದುವರೆದು ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವರು ಉತ್ತರಸಿದ್ದಾರೆ.