ವೃದ್ಧಾಪ್ಯ ವೇತನದಲ್ಲಿ ಶಾಲಾ ಮಕ್ಕಳಿಗೆ ಸಿಹಿಯೂಟ
ಹೂವಿನ ಹಡಗಲಿ 02: ತಮಗೆ ಸರ್ಕಾರದಿಂದ ದೊರೆಯುವ ವೃದ್ಧಾಪ್ಯ ವೇತನದಲ್ಲಿ ತಿಂಗಳಿಗೊಮ್ಮೆ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲಾ ಮಕ್ಕಳಿಗೆ ಸಿಹಿಯೂಟ ಉಣಿಸುವ ನಿಟ್ಟಿನಲ್ಲಿ ಸತತ ಐದಾರು ವರ್ಷಗಳಿಂದ ನಿರಂತರವಾಗಿ ತಿಮಲಾಪುರ ಗ್ರಾಮದ 63 ವರ್ಷದ ಹಿರಿಯ ಜೀವ ಗಂಗಪ್ಪಜ್ಜ ಕಾಯಕ ಮುಂದುವರೆಸಿಕೊಂಡು ಬಂದಿದ್ದಾರೆ.
ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕಾಯಕ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಿಂಗಳಿಗೊಮ್ಮೆ ಸಿಹಿ ತಯಾರಿಸಿ ಬಡಿಸಿ ಮಕ್ಕಳೊಂದಿಗೆ ಕುಳಿತು ತಾವು ಉಣ್ಣುವ ಅಜ್ಜನ ಎಲೆಮರೆಯ ಸೇವೆ ಅನನ್ಯ ಎಂದು ಶಾಲೆಯಮುಖ್ಯ ಗುರುಗಳಾದ ಮಹಮದ್ ರಫಿ ಬಣ್ಣಿಸಿದರು. ಶಾಲೆಯ ಶಿಕ್ಷಕರಾದ ಸಿದ್ದೇಶ್ ಮರೊಳ್, ರೇಣುಕಾ ಸರಾಫ್, ಸಣ್ಣ ಹಾಲೇಶ್, ಪ್ರಾಥಮಿಕ ಶಾಲಾ ಮುಖ್ಯ ಗುರು ಕೋಟೆಪ್ಪಶಿಕ್ಷಕಿ ಮಮತಾ ಎಂ ಇತರರು ಮೆಚ್ಚುಗೆ ವ್ಯಕ್ತಪಡಿಸಿದರು. ಗಂಗಪ್ಪಜ್ಜನ ನಡೆ ಅನುಕರಣೀಯ. ಇಂಥವರ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರಿ ಶಾಲಾ ಮಕ್ಕಳ ಪೌಷ್ಟಿಕತೆ ಹೆಚ್ಚುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಈತರಹದ ವಿಶೇಷದಾನಿಗಳು ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.