ಸ್ವಾಮಿ ವಿವೇಕಾನಂದರು ಆದರ್ಶಪ್ರಾಯರು: ಡಾ.ಅರ್ಚನಾ ಅಥಣಿ
ಲೋಕದರ್ಶನ ವರದಿ
ಕಾಗವಾಡ 15: ಮಹಾ ಮೇಧಾವಿ ಮತ್ತು ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ಸದಾ ಚಿಂತನಶೀಲತೆಯ ವ್ಯಕ್ತಿಯಾಗಿದ್ದು, ಅವರೇ ಯುವಜನಕ್ಕೆ ಆದರ್ಶಪ್ರಾಯರು ಎಂದು ಸಾಹಿತಿ ಡಾ.ಅರ್ಚನಾ ಅಥಣಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕೃಷ್ಣರಾವ ಅಣ್ಣಾರಾವ ಲೋಕಾಪುರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ "ಸ್ವಾಮಿ ವಿವೇಕಾನಂದರ 159ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಉಪನ್ಯಾಸಕಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿ ಬಂಡೆಯ ಮೇಲೆ ಯೋಗಾಭ್ಯಾಸ ನಡೆಸಿದರು. ತಪ್ಪು ದಾರಿಯತ್ತ ಸಾಗುತ್ತಿದ್ದ ಸಮಾಜವನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದರು. ಯುವಕ, ಯುವತಿಯರು ದೇಶದ ಶಕ್ತಿಯಾಗಿದ್ದಾರೆ. ಆದರೆ ಮಾರ್ಗದರ್ಶನದ ಕೊರತೆಯಿಂದ ಯುವ ಮನಸ್ಸುಗಳು ಬೇಡವಾದ ವಿಷಯಗಳ ಕಡೆಗೆ ಗಮನ ಹರಿಸುತ್ತಿವೆ ಎಂದು ಕಳವಳ ವ್ಯಕ್ತ ಪಡಿಸಿದರು. 125 ವರ್ಷಗಳ ಹಿಂದೆ ಚಿಕ್ಯಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿರುವ ಭಾಷಣ ಇಂದಿಗೂ ಸಹ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲೇ ಅದನ್ನು ಅನುಸರಿಸುವಂತಹ ಭಾಷಣ ಮಾಡಿದ್ದರು. ಅದು ಇಂದಿಗೂ ಪ್ರಸ್ತುತವಾಗಿದೆ ಎಂದರು.
ವಿವೇಕಾನಂದರು ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಶಾಲದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನೇವರಿ 12 ರಂದು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತಿದೆ ಎಂದು ಡಾ.ಅರ್ಚನಾ ಅಥಣಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಆರ್.ಎಮ್.ದೇವರಡ್ಡಿ ವಹಿಸಿ ಮಾತನಾಡಿದರು. ಎನ.ಎಸ್.ಎಸ್. ಅಧಿಕಾರಿ ಭಾಗ್ಯಶ್ರೀ ಗುಂಡಾ ಸಾಗರ ಕಟಗೇರಿಯವರು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪ್ರೀತಿ ದೇವರಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಸವಿತಾ ಬಡಕಂಬಿ ವಂದಿಸಿದರು.