ಧಾರವಾಡ - ಹುಬ್ಬಳ್ಳಿ

ಸತತ ಮಳೆ: ರೈತರಿಗೆ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಸಲಹೆ

ಸತತ ಮಳೆ: ರೈತರಿಗೆ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಸಲಹೆ

ಧಾರವಾಡ 01: ಸತತ ಮಳೆಯಿಂದ ಉಂಟಾದ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಜಂಟಿ ಕೃಷಿ ನಿರ್ದೇಶಕರು ತಾಂತ್ರಿಕ ಸಲಹೆ ನೀಡಿದ್ದಾರೆ. 

ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ​‍್ಾಡು ಮಾಡುವುದು. ಹೊಲದಲ್ಲಿ ಅಲ್ಲಲ್ಲಿ ಬಸಿಗಾಲುವೆಗಳು ಮಾಡಿ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ನೋಡಿಕೊಳ್ಳುವುದು. ಮಳೆ ನಿಂತ ಮೇಲೆ ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಶಿಫಾರಸ್ಸಿನಂತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ಯೂರಿಯಾ 15 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗಳಿಗೆ ಸಿಂಪಡಿಸುವುದು. ಮಳೆಯಾಶ್ರಿತ  ಭತ್ತದಲ್ಲಿ ನೀರು ನಿಂತ ತಾಕುಗಳಲ್ಲಿ “ಹೊಡೆತ” ಕಾರ್ಯವನ್ನು ಕೈಗೊಳ್ಳುವುದು. ಸತತ ಮಳೆಯಿಂದ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಶೇ. 0.5 ಕಬ್ಬಿನದ ಸಲ್ಪೇಟ್ ಮತ್ತು ಶೇ. 0.5 ರ ಸತುವಿನ ಸಲ್ಪೇಟ್ ದ್ರಾವಣವನ್ನು 15 ದಿವಸದ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು. 

ಪ್ರತಿ ಲೀಟರ್ ನೀರಿಗೆ 5 ಗ್ರಾಂ. 15:0:45 ಲಘು ಪೋಷಕಾಂಶ ಸಿಂಪರಣೆ ಕೈಗೊಳ್ಳುವುದು. ಅಥವಾ ಪ್ರತಿ ಲೀಟರ್ ನೀರಿಗೆ 3.0 ಗ್ರಾಂ. 0:52:34+ಯೂರಿಯಾ 1.0 ಗ್ರಾಂ. ಬೆರೆಸಿದ ದ್ರಾವಣ ಸಿಂಪಡಿಸಬಹುದು. ಅಥವಾ ಪ್ರತಿ ಲೀಟರ್ ನೀರಿಗೆ 12:61:0 ಅ 3.0 ಗ್ರಾಂ. +0:0:50 ಅ 3.0 ಗ್ರಾಂ. ಬೆರೆಸಿದ ದ್ರಾವಣ ಸಿಂಪಡಿಸಬೇಕು. 

ಹೆಚ್ಚಿನ ಮಳೆಯಿಂದ ಗೋವಿನ ಜೋಳದಲ್ಲಿ ಅಲ್ಲಲ್ಲಿ ಕಾಂಡ ಕೊಳೆರೋಗ ಕಂಡು ಬರುವ ಸಾಧ್ಯತೆಯಿದ್ದು ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿನಲ್ಲಿ 2 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.5 ಗ್ರಾಂ. ಸ್ಟ್ರೆಪ್ಟೋಮೈಸಿನ್ ಸಲ್ಪೇಟ್ ಬೆರೆಸಿದ ದ್ರಾವಣ ಬೇರು ತೊಯ್ಯುವಂತೆ ಮಣ್ಣಿಗೆ ಹಾಕಬೇಕು. 

ಮುಂಚಿತವಾಗಿ ಬಿಟಿ ಹತ್ತಿ ಬೆಳೆದ ರೈತರು ರೈತರ ಹೊಲಗಳಲ್ಲಿ ಚೂಪು ಮೂತಿಹುಳಿನ ಬಾಧೆ ಕಂಡು ಬರುವ ಸಾಧ್ಯತೆಯಿದ್ದು ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಸೋಲೋಮನ್ 300 ಓ.ಡಿ.  ಬೆರೆಸಿ ಸಿಂಪಡಿಸುವುದು. ಮುಂಜಾನೆಯ ಸಮಯದಲ್ಲಿ ಫ್ರೌಢ ದುಂಬಿಗಳನ್ನು ಕೈಯಿಂದ ಆರಿಸಿ ನಾಶಪಡಿಸುವುದು. ಸೊಯಾಅವರೆ ಬೆಳೆಯಲ್ಲಿ ಎಲೆ ತಿನ್ನುವ ಹುಳುವಿನ ಬಾಧೆ ಕಂಡು ಬರುವ ಸಾಧ್ಯತೆಯಿದ್ದು ನಿರ್ವಹಣೆಗಾಗಿ 0.5 ಮಿ.ಲೀ ಲ್ಯಾಮ್ಡಾ ಸೈಲೋಥ್ರಿನ್ 5 ಇಸಿ ಅಥವಾ 2.0 ಮಿ.ಲೀ ಕ್ವಿನಾಲಫಾಸ್ 25 ಇಸಿ ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಝೇಯೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸೋಯಾಅವರೆ ಬೆಳೆಯಲ್ಲಿ ತಂಬಾಕಿನ ಹುಳುವಿನ ಬಾಧೆ ನಿಯಂತ್ರಣಕ್ಕೆ ಜೈವಿಕ ಪೀಡೆ ನಾಶಕ 2 ಗ್ರಾಂ ನೊಮೊರಿಯಾ ರಿಲೈ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. 

ಕಬ್ಬಿನ ಬೆಳೆಯಲ್ಲಿ ತುಕ್ಕುರೋಗದ ಬಾಧೆ ಕಂಡು ಬರುವ ಸಾಧ್ಯತೆಯಿದ್ದು ನಿರ್ವಹಣೆಗೆ 1 ಮಿ.ಲೀ. ಹೆಕ್ಸಾಕೋನಾಝೇಲ್ ಅಥವಾ 1 ಮಿ.ಲೀ. ಪ್ರೋಪಿಕೋನಾಝೇಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಬೆಳೆಗೆ ಯಾವುದೇ ಸಿಂಪರಣೆಯ ನಂತರ ಕನಿಷ್ಠ 4 ತಾಸುಗಳವರೆಗೆ ಮಳೆ ಬಾರದ ಪರಿಸ್ಥಿತಿ ಅರಿತುಕೊಂಡು ಸಿಂಪರಣೆ ಮಾಡುವುದೊಳಿತು ಎಂದು ಪ್ರಕಟಣೆ ಮೂಲಕ ಸಲಹೆ ನೀಡಿದ್ದಾರೆ. 


ಸುದ್ದಿ ಓದಿ