ಗುಳೇಗುಡ್ಡ

ಸೇವಾಗುಣದಿಂದ ಬದುಕು ಸಾರ್ಥಕ : ಸುಮತಿ ಹೆಗಡೆ

ಸೇವಾಗುಣದಿಂದ ಬದುಕು ಸಾರ್ಥಕ : ಸುಮತಿ ಹೆಗಡೆ
ಗುಳೇದಗುಡ್ಡದ ಸರಸ್ವತಿ ವಿದ್ಯಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡುಬಿದರಿಯ ಸುಮತಿ ಹೆಗಡೆ ಮಾತನಾಡಿದರು.

ಗುಳೇದಗುಡ್ಡ 29: ಮನುಷ್ಯನಲ್ಲಿ ಬದುಕುವ ಎಲ್ಲ ಉತ್ತಮ ಗುಣಗಳು ಇರುವ ಜೊತೆಗೆ ಸೇವಾಗುಣವೂ ಇರಬೇಕು. ಸೇವಾ ಗುಣದಿಂದ ಬದುಕು ಸಾರ್ಥಕವಾಗುತ್ತದೆ. ಅಂತಹ ಗುಣ ಬೆಳೆಸಿಕೊಳ್ಳಬೇಕು ಎಂದು ಪಡುಬಿದರಿಯ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸುಮತಿ ಹೆಗಡೆ ಹೇಳಿದರು.  

ಮಂಗಳವಾರ ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಪಾರ್ವತಿಬಾಯಿ ನಾರಾಯಣಸಾ ಪವಾರ ಸಭಾಭವನದಲ್ಲಿ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸ್ಥಾಪಿತವಾದ ಸರಸ್ವತಿ ಸೇವಾ ಸಾಗರ ಟ್ರಸ್ಟ್‌ ಇವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

ದಾನಧರ್ಮಾದಿ ಗುಣಗಳು ಮನುಷುನಲ್ಲಿ ಉತ್ತಮ ನಡತೆಗಳನ್ನು ರೂಪಿಸಬಲ್ಲವು. ಸಂಘದ ಒಳಗಡೆ ಇಂತಹ ಉತ್ತಮ ಗುಣಗಳನ್ನು ಬೆಳೆಸಿಕೊಂಡಾಗ ಸಮಾಜದ ಸಂಕಷ್ಟದಲ್ಲಿರುವ ಹಾಗೂ ಅಸಹಾಯಕರಿಗೆ ಮೇಲಕ್ಕೆ ಬರಲು ಸಾಧ್ಯವಾಗುತ್ತದೆ. ನಿರುದ್ಯೋಗಿಗಳಿಗೆ ತರಬೇತಿ ನೀಡಿ ಬದುಕು ರೂಪಿಸಿದರೆ, ಅವರು ಆರ್ಥಿಕವಾಗಿ ಪ್ರಗತಿಹೊಂದಲು ಸಾಧ್ಯವಾಗುತ್ತದೆ. ಇದರಿಂದ ಸಮಾಜ ಸದೃಢವಾಗಿ ಬೆಳೆಯಲು ಸಾಧ್ಯ ಎಂದರು.  

ವಿಶ್ರಾಂತ ಶಿಕ್ಷಕ ಕೆ.ಎಚ್‌. ಮರಳಿ ಮಾತನಾಡುತ್ತಾ  ಜನಸೇವೆಯೇ ಜನಾರ್ಧನ ಸೇವೆೆ ಎಂಬ ತತ್ವದಡಿ ಸರಸ್ವತಿ ಸೇವಾ ಸಾಗರ ಟ್ರಸ್ಟ್‌ ಕಾರ್ಯ ಮಾಡುತ್ತಿದೆ. ಈ ಸಂಸ್ಥೆ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಶಾಲಾ ಖರ್ಚು ಭರಿಸುವ, ಬಡ ಮಹಿಳೆಯರಿಗಾಗಿ ಉದ್ಯೋಗ ತರಬೇತಿ ಕೇಂದ್ರಗಳನ್ನು ತೆರೆದು ಅವರಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸುವುದು, ಅದರ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅವರ ಚಿಕಿತ್ಸಗೆ ಸಹಾಯ ಮಾಡುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ. ಅನಾಥ ಮಕ್ಕಳಿಗೆ, ಅಂಗವಿಕರಿಗೆ, ಟ್ರಸ್ಟ್‌ ವೃದ್ಧರಿಗೆ ಆಶ್ರಯ ಒದಗಿಸುವ ಸಂಕಲ್ಪ ಹೊಂದಿದ್ದು ನೋಡಿದರೆ, ಸರಸ್ವತಿ ಸೇವಾ ಸಾಗರ ಟ್ರಸ್ಟ್‌ ಒಳ್ಳೆಯ ಉದ್ದೇಶ ಹೊಂದಿದೆ. ಇದರಿಂದ ಉತ್ತಮ  ಸಮಾಜ ನಿರ್ಮಾಣ ಮಾಡಿದಂತಾಗಿದೆ. ಈ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಾಧನೆಯ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು. 

ದಿವ್ಯಸಾನಿಧ್ಯವಹಿಸಿ ಮುರಘಾಮಠದ ಕಾಶೀನಾಥ ಶ್ರೀಗಳು ಮಾತನಾಡಿ, ಬಡವರ, ದೀನ, ದಲಿತರ, ಅಸಹಾಯಕರ ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟೇ ಶ್ರೇಷ್ಠವಾದುದು. ಸಮಾಜದಲ್ಲಿ ಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರನ್ನು ಮೇಲಕ್ಕೆತ್ತುವ ಕಾರ್ಯ ಇಂತಹ ಸೇವಾ ಸಂಘಗಳ ಮುಖಾಂತರ ನಡೆಯಬೇಕು ಎಂದರು. ಕಾರ್ಯಕ್ರಮದ ನಂತರ  ತರಕಾರಿ ಮಾರುಕಟ್ಟೆಗೆ ಹೋಗಿ ಸಾರ್ವಜನಿಕರಿಗೆ ಒಂದು ಸಾವಿರ ಮಾಸ್ಕ್‌ ವಿತರಿಸಿದರು. 

ಕಾರ್ಯಕ್ರಮದಲ್ಲಿ ಘನಶಾಮದಾಸ ರಾಠಿ, ಮನೋಹರ ಶೆಟ್ಟರ್, ಭಾರತಿ ತಾಂಡೂರ, ಪಿ.ಆರ್‌. ಬಂತಲ, ಶಂಕರ ರೂಡಗಿ, ಶರಣು ಚಿಕ್ಕನರಗುಂದ, ಗಣೇಶ ನರೇಗಲ್ಲ, ಪ್ರವೀಣ ಜೋಳದ, ರಾಜಶೇಖರ ಹಿರೇಮಠ, ಮಹಾಂತೇಶ ನಾಗಠಾಣ, ಪ್ರದೀಪ ಹುಲ್ಲೂರ, ರಾಜು ಸತ್ತಿಗೇರಿ, ಮಹಾಲಿಂಗೇಶ ಯಂಡಿಗೇರಿ, ನೀಲಮ್ಮ ಕೊಟಗಿ, ಶೈಲಜಾ ಶಿವನಗೌಡ್ರ, ಮನೋಹರ ಕಂಬಾಳಿಮಠ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ