ಶರಣರ ವಚನಗಳನ್ನ ಅಧ್ಯಯನ ಮಾಡುವ ಜೊತೆಗೆ ಬದುಕಿಗೆ ಅಳವಡಿಸಿಕೊಳ್ಳಿ: ಹತ್ತಿಮತ್ತೂರಶ್ರೀ
ಶಿಗ್ಗಾವಿ 6: ಶರಣರು ನುಡಿದಂತೆ ನಡೆಯುವ ಮೂಲಕ ಇಂದಿಗೂ ಸ್ಮರಣೀಯರಾಗಿದ್ದಾರೆ ಆದ್ದರಿಂದ ಮನುಕುಲದ ಸನ್ಮಾರ್ಗಕ್ಕೆ ಶರಣರ ವಚನಗಳು ಮಾರ್ಗದರ್ಶಿಯಾಗಿವೆ ಎಂದು ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಸ್ವಾಮೀಜಿಗಳು ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ 31ನೇ ಶರಣ ಸಂಸ್ಕೃತಿ ಉತ್ಸವ-2024 ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ 2ನೇ ದಿನದ ಧರ್ಮ ಸಮಾರಂಭದಲ್ಲಿ ಮಾತನಾಡಿದ ಅವರು, ಶರಣರ ವಚನಗಳನ್ನ ಅಧ್ಯಯನ ಮಾಡುವ ಜೊತೆಗೆ ಬದುಕಿಗೆ ಅಳವಡಿಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಿದೆ ಅವರ ತತ್ವಗಳು, ವಚನಗಳು ಇಡೀ ಮನುಕುಲಕ್ಕೆ ದಾರಿ ತೋರುತ್ತಿವೆ. ಸುಂದರ, ಸದೃಢ ಸಮಾಜ ನಿರ್ಮಾಣಕ್ಕೆ ವಚನಗಳ ಸಂದೇಶಗಳನ್ನು ಅರ್ಥೈಯಿಸಿಕೊಳ್ಳಬೇಕು. ಅವುಗಳಂತೆ ನಡೆಯಬೇಕು. ಅದರಿಂದ ಮನುಷ್ಯ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಿದೆ, ಹಾಲಿನಲ್ಲಿ ತುಪ್ಪವನ್ನು ಹುಡುಕಿದಂತೆ ಜೀವನದಲ್ಲಿ ಜ್ಞಾನದ ದಾರಿ ಹುಡುಕಬೇಕು. ಅಂದಾಗ ಜೀವನ ಸಾರ್ಥವಾಗುತ್ತದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ, ಅಪೇಕ್ಷೆ ಮತ್ತು ಅಪೇಕ್ಷೆಣೆಗಳಿಲ್ಲದ ಸೇವೆ ಸಾರ್ಥವಾದದ್ದು, ಕಾಯಕಕ್ಕೆ ಯಾವುದೇ ಫಲಾನುಫಲ ಅಪೇಕ್ಷೆ ಪಡೆಯದೇ ಮಾಡುವ ಸೇವೆ ಮುಖ್ಯವಾಗಿದೆ. ಅಂತಹ ಸೇವೆಯನ್ನು ಶರಣರು ಮಾಡಿದ್ದಾರೆ. ಅವರ ಸೇವೆ ಸ್ಮರಣೆ ಉದ್ದೇಶ ಇದರಲ್ಲಿದೆ ಎಂದರು. ಧಾರವಾಡ ಕರ್ನಾಟಕ ವಿಶ್ಯವಿದ್ಯಾಲಯದ ಡೀನ್ ಡಾ.ಎ.ಸಿ.ವಾಲಿ ಅವರು ಪ್ರವಚನ ನೀಡಿದರು.
ಮೋಟೆಬೆನ್ನೂರ ಖ್ಯಾತ ತತ್ವಪದಗಳ ಕಲಾವಿದರಾದ ಅಡಿವೆಪ್ಪ ಕುರಿಯರ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ಶಶಿಕಾಂತ ರಾಠೋಡ, ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಸೇರಿದಂತೆ ಸೇವಾ ಸಮಿತಿ ಸದಸ್ಯರು ಇದ್ದರು.