371ಜೆ ಹೋರಾಟಕ್ಕೆ ಭೀಮಾ ಯುನಿವರ್ಸಲ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಬೆಂಬಲ
ಸಿಂದಗಿ 31: ಸತತ 29 ದಿನಗಳಿಂದ ನಡೆಯುತ್ತಿರುವ 371 ಜೆ ಹೋರಾಟಕ್ಕೆ ಭೀಮಾ ಯುನಿವರ್ಸಲ್ ಶಾಲೆಯ ಮಕ್ಕಳು ಹಾಗೂ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗ ತಮ್ಮ ಬೆಂಬಲ ಸೂಚಿಸಿದರು. ಬಸವೇಶ್ವರ ವೃತ್ತದಲ್ಲಿ ರೇ ಚ ರೇವಡಿಗಾರ ಪ್ರತಿಷ್ಠಾನ ಹಾಗೂ 371 ಜೆ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ನೂರಾರು ವಿದ್ಯಾರ್ಥಿಗಳು ಸಾರಂಗಮಠದಿಂದ ಜಾಥಾ ಪ್ರಾರಂಭಿಸಿ ಸ್ವಾಮಿ ವಿವೇಕಾನಂದ ವೃತ್ತ ಹಾಗೂ ಬಸವೇಶ್ವರ ವೃತ್ತದ ಮಾರ್ಗವಾಗಿ ಹೋರಾಟಕ್ಕೆ ಬೆಂಬಲ ಸೂಚಿಸುವ ಘೋಷಣೆಗಳನ್ನು ಕೂಗುತ್ತ ಹೋರಾಟದ ವೇದಿಕೆಯನ್ನು ತಲುಪಿದರು.
ಸಂಸ್ಥೆಯ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಡಾ. ಎಂ ಎಂ ಪಡಶೆಟ್ಟಿ ಮಾತನಾಡಿ 371 ಎ ಕೈತಪ್ಪಿರುವುದರಿಂದ ಬಡತನ, ನೀರಾವರಿ ಸಮಸ್ಯೆ, ಉದ್ಯೋಗಿಕ ಸಮಸ್ಯೆ, ಸಾಮಾಜಿಕ ಸಮಸ್ಯೆಗಳು ವಿಜಯಪುರ ಜಿಲ್ಲೆಯನ್ನು ಬಾಧಿಸುತ್ತಿವೆ. ಹೋರಾಟ ವಿಳಂಬವಾದರೂ ಸದ್ಯ ಗತಿ ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ರಾಜಕೀಯ ಹಿತಾಸಕ್ತಿಯ ಕೊರತೆಯಿಂದಾಗಿಯೇ ನಾವು ಅವಕಾಶ ವಂಚಿತರಾಗಿದ್ದೇವೆ.
ಇನ್ನಾದರೂ ಜಿಲ್ಲೆಯ ರಾಜಕೀಯ ಮುಖಂಡರು ಜಿಲ್ಲೆಯ ವಾಸ್ತವಿಕ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವರಿಕೆ ಮಾಡಿ ಕೊಟ್ಟು ಮುಂಬರುವ ಪೀಳಿಗೆಗಾದರೂ ಇದರ ಸದುಪಯೋಗವಾಗುವ ನಿಟ್ಟಿನಲ್ಲಿ ಯುದ್ದೋಪಾದಿಯಲ್ಲಿ ಕ್ರಿಯಾಶೀಲರಾಗಬೇಕು ಎಂದರು. ಹೋರಾಟ ಸಮಿತಿಯ ಸದಸ್ಯರಾದ ರಂಗನಾಥ ಥೋರ್ೆ, ಆನಂದ ಶಾಬಾದಿ ಪ್ರಾಸ್ತಾವಿಕ ಮಾತನಾಡಿದರು.
ಭೀಮಾ ಸ್ಕೂಲಿನ ನಿರ್ದೇಶಕರಾದ ಶಿವಶರಣ ಮಾವೂರ, ಭೀಮಾಶಂಕರ ತಾರಾಪುರ, ಶಾಂತು ಕುಂಬಾರ, ದಯಾನಂದ ಕಲಬುರ್ಗಿ, ಶಂಕರ್ ಮಲ್ಲೇದ, ಶಿವಕುಮಾರ ಹತ್ತಿ, ಸಾಯಬಣ್ಣ ದೇವರಮನಿ ಸಿಬ್ಬಂದಿಗಳಾದ ಶಬಾನಾ ಶೇಖ, ಕುಸುಮಾ, ರತ್ನಾ ನಾಯಕ, ಚಂದ್ರಕಾಂತ ನಾಯಕ, ವಿನುತ ಪಟ್ಟಣಶೆಟ್ಟಿ, ಪ್ರಕಾಶ ನಾಟಿಕಾರ, ಧರ್ಮಣ್ಣ ಗಬಸಾವಳಗಿ, ಎಸ್ ಕೆ ಬಸವರಾಜ, ಮಂಜುನಾಥ ಪಾಟೀಲ , ಶಾಂತಪ್ಪ ಅಮ್ಮಾಳ್, ಸಿ ಜಿ ಬಿರಾದಾರ ಸೇರಿದಂತೆ ಅನೇಕರಿದ್ದರು.