ಆರೋಗ್ಯವೇ ಸಂಪತ್ತು ಹಿ ಶಂಭು ಜೋಳದಕುಕನೂರ ಶ್ರೀಗಳ ಜನ್ಮದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರ
ಕುಕನೂರ. ಅ 31: ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಪೂಜ್ಯರಾದ ಶ್ರೀ ಮ ನಿ ಪ್ರ ಡಾ. ಮಹಾದೇವ ಮಹಾಸ್ವಾಮಿಗಳ 37ನೇ ವರ್ಷದ ಜನ್ಮದಿನದ ಅಂಗವಾಗಿ ಅನ್ನದಾನೀಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ, ಎಂ.ಎಸ್. ಚಾರಿಟೇಬಲ್ ಟ್ರಸ್ಟ್ ಕುಕನೂರ ಹಾಗೂ ಜಯಪ್ರೀಯಾ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ವಿನಾಯಕ ಕಣ್ಣಿನ ಕೇಂದ್ರ ಕುಕನೂರ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಮಠದ ಅಧ್ಯಕ್ಷರಾದ ಶಂಭು ಜೋಳದ ಅವರು, ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಪೂಜ್ಯರ ಜನ್ಮದಿನದ ಅಂಗವಾಗಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಅರ್ಥಪೂರ್ಣ ಹಾಗೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ವೀರಯ್ಯ ತೋಂಟದಾರ್ಯ ಮಠ ಅವರು, ಪೂಜ್ಯ ಮಹಾಸ್ವಾಮಿಗಳು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅಪಾರವಾಗಿದೆ. ಮಠದ ಮೂಲಕ ಅನ್ನದಾಸೋಹ, ಧಾರ್ಮಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ.
ಜನ್ಮದಿನದ ಸಂದರ್ಭದಲ್ಲಿ ಜನರ ಆರೋಗ್ಯದ ಕಾಳಜಿ ವಹಿಸಿ ಇಂತಹ ಶಿಬಿರ ಆಯೋಜಿಸಿರುವುದು ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಸಮಾಜದ ಅಭಿವೃದ್ಧಿಗೆ ಇಂತಹ ಮಾನವೀಯ ಕಾರ್ಯಗಳು ಸದಾ ಪ್ರೇರಣೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಿಜೆಪಿ ಕುಕನೂರ ತಾಲೂಕು ಅಧ್ಯಕ್ಷರಾದ ಮಾರುತಿ ಗಾವರಾಳ ಅವರು, ಇಂದಿನ ದಿನಮಾನಗಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ಬಡವರು ಹಣದ ಕೊರತೆಯಿಂದ ಆರೋಗ್ಯ ತಪಾಸಣೆಯಿಂದ ದೂರ ಉಳಿಯಬಾರದು. ಅವರಿಗೆ ಉಚಿತವಾಗಿ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸಿರುವ ಸಂಘ-ಸಂಸ್ಥೆಗಳ ಕಾರ್ಯ ಅಭಿನಂದನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಸವರಾಜ ಪಲ್ಲೆದ, ಶ್ರೀಶೈಲ್ ಧರ್ಮಸ್ಥಳ, ಮೇಗರಾಜ್ ಜಿಡಿಗಿ, ಕಾಶಿಂಸಾಬ್ ಸಂಗಟಿ, ಶ್ರೀಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ ಸೇರಿದಂತೆ ಗಣ್ಯರು, ಸದ್ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು, ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಯಿತು.