ಬೆಳಗಾವಿ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹ: ಸವದತ್ತಿ- ಧಾರವಾಡ ರಸ್ತೆ ತಡೆದು ರೈತರ ಆಕ್ರೋಶ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹ: ಸವದತ್ತಿ- ಧಾರವಾಡ ರಸ್ತೆ ತಡೆದು ರೈತರ ಆಕ್ರೋಶ
Demand for fair support price for sugarcane: Farmers express outrage by blocking the Savadatti-Dhar



            ಸವದತ್ತಿ 31: ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ಲಾಭದಾಯಕ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿ ಹಾಗೂ ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಸಾವಿರಾರು ರೈತರು  ರಸ್ತೆಯಲ್ಲಿ ಶನಿವಾರ ಹಠಾತ್ ಪ್ರತಿಭಟನೆ ನಡೆಸಿ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ರೈತರು, ಸಕ್ಕರೆ ಕಾರ್ಖಾನೆಗಳು ಮತ್ತು ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

          ಬಳಿಕ ನಗರದ ಕರೀಕಟ್ಟಿ ಕ್ರಾಸ್ ಮತ್ತು ರಾಮದುರ್ಗ ಕ್ರಾಸ್ನಲ್ಲಿ ರಸ್ತೆ ತಡೆ ನಡೆಸಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಸುರೇಶ ಸಂಪಗಾವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬಿಗೆ ಯೋಗ್ಯ ಬೆಲೆಯಾಗಿ ಪ್ರತಿ ಟನ್ಗೆ 5,500 ಘೋಷಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯುತವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

             ಸರ್ಕಾರಗಳು ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮತ್ತೊಬ್ಬ ಮುಖಂಡ ಶಿವಾನಂದ ಸರದಾರ ಮಾತನಾಡಿ, ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಅಲೀಸಾಬ ನೂಲಗಿ ಮುಂತಾದವರು ಮಾತನಾಡಿದರು.

                ಪ್ರತಿಭಟನೆಯ ಕಾರಣದಿಂದ  ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತು. ಬಸ್ ನಿಲ್ದಾಣದ ಬಳಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸವದತ್ತಿಗೆ ಆಗಮಿಸಿದ್ದ ರೇಣುಕಾ ಯಲ್ಲಮ್ಮ ದೇವಿಯ ಭಕ್ತರು ಹಾಗೂ ಸಾರ್ವಜನಿಕ ಪ್ರಯಾಣಿಕರು ಬಸ್ ಇಲ್ಲದೆ ತೀವ್ರ ಪರದಾಡುವಂತಾಯಿತು. ಪ್ರತಿಭಟನೆಯ ಬಳಿಕ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ.

           ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಮೂಲಕ ಸರ್ಕಾರದ ಗಮನ ಸೆಳೆಯಲು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಈರಣ್ಣಾ ಹಳ್ಳದ, ದ್ಯಾಮನಗೌಡ ಪಾಟೀಲ್, ಮಕ್ತುಮಸಾಬ ಹಲಿಮನವರ, ಪುಂಡಲೀಕ ಕಬ್ಬೂರ, ಮೃತ್ಯುಂಜಯ ಪೂಜಾರ, ಉಮೇಶ್ ಕುರಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ