ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ: ಕೆ. ಪಿ. ಸುರೇಶ
ಧಾರವಾಡ,08: ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಪ್ರತಿಯೊಂದು ನಿಮಿಷ ಮತ್ತು ಪ್ರತಿಯೊಂದು ಅಂಕ ನಿಮ್ಮ ಜೀವನದಲ್ಲಿ ಅತ್ಯಂತ ಅಮೂಲ್ಯ ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಉನ್ನತ ವ್ಯಕ್ತಿಯಾಗಬೇಕೆಂದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಪಿ. ಸುರೇಶ ಹೇಳಿದರು.
ಇಲ್ಲಿನ ಕೆ.ಇ ಬೋರ್ಡಿನ ಪದವಿ ಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭವನ್ನು ಗುರುವಾರದಂದು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಸುನಿತ ಪುರೋಹಿತ ಮಾತನಾಡಿ, ಶತಮಾನ ಕಂಡ ಈ ಸಂಸ್ಥೆಯ ವಿದ್ಯಾರ್ಥಿಗಳಾದ ತಾವೆಲ್ಲ ಭಾಗ್ಯಶಾಲಿಗಳು ಈ ಸಂಸ್ಥೆಯ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಥೆಗೂ ಮಹಾವಿದ್ಯಾಲಯಕ್ಕೂ ಮತ್ತು ತಂದೆ ತಾಯಿಗಳಿಗೂ ಕೀರ್ತಿ ತರಬೇಕೆಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ.ಎ ಸಿದ್ಧಾಂತಿ ಅವರು ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಿ ತಮಗೂ ಮತ್ತು ಮಹಾವಿದ್ಯಾಲಯಕ್ಕೂ ಹೆಮ್ಮೆಯನ್ನು ತರಬೇಕೆಂದು ಆಶಿಸಿದರು.ಕಾರ್ಯಕ್ರಮದಲ್ಲಿ ವಿಧ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಶ್ರೀಮತಿ ಅನುರಾಧಾ ಹುಯಿಲಗೋಳ, ಕೆ ಎಸ್ ಮಡಿವಾಳ ಉಪಸ್ಥಿತರಿದ್ದರು. ಬಿ.ಆರ್ ಉಡುಕೇರಿ ಸ್ವಾಗತಿಸಿದರು. ನೇತ್ರಾ ಎಳಮಲಿ ಅವರು ವಂದಿಸಿದರು. ಐಶ್ವರ್ಯ ನಡುವಿನಮನಿ ಹಾಗೂ ವಿನೋದಾ ಹುಲಿಮಠ ನಿರೂಪಿಸಿದರು.