ಹೂವಿನ ಹಡಗಲಿ

ಚಲಿಸುವ ಬಸ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಚಲಿಸುವ ಬಸ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಹೂವಿನಹಡಗಲಿ 14:  ತಾಲೂಕಿನ ತಿಪ್ಪಾಪುರ ಹೊರ ಹೊಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿ ಬುಧವಾರ ಚಲಿಸುವ ಬಸ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.  

ಮೃತ ವಿದ್ಯಾರ್ಥಿನಿ ತಾಲೂಕಿನ ಹೊಳಲು ಗ್ರಾಮದ ಎಲ್‌.ಶ್ವೇತಾ ಶಾಂತಪ್ಪನವರ (20),ಎಂಜಿನಿಯರಿಂಗ್ ಕಾಲೇಜಿನ ಇ.ಅಂಡ್ ಸಿ.ವಿಭಾಗದ ಮೊದಲ ಸೆಮಿಸ್ಟರ್‌ನಲ್ಲಿ ಓದುತಿದ್ದ ಶ್ವೇತ ಪ್ರತಿದಿನ ಪಟ್ಟಣದ ಹಾಸ್ಟೆಲ್‌ನಿಂದ ಕಾಲೇಜಿಗೆ ಬಸ್‌ನಲ್ಲಿ ಹೋಗಿ ಬರುತ್ತಿದ್ದರು. ಪಟ್ಟಣದ ನಿಲ್ದಾಣದಲ್ಲಿ ಹಾವೇರಿಗೆ ಹೊರಟಿದ್ದ ಬಸ್ ಹತ್ತಿದ್ದ ವಿದ್ಯಾರ್ಥಿನಿ ಕಾಲೇಜು ಬಳಿ ನಿಲುಗಡೆ ಕೇಳಿದ್ದಾಳೆ.  

ಇಲ್ಲಿ ಬಸ್ ನಿಲುಗಡೆ ಮಾಡಲಾಗುವುದಿಲ್ಲ ಎಂದು ನಿರ್ವಾಹಕಿ ಹೇಳಿದ್ದಾರೆ. ಕಾಲೇಜು ಮುಂಭಾಗದಲ್ಲಿ ರಸ್ತೆ ತಡೆಗಳಿರುವ ಬಸ್ ನಿಧಾನವಾಗಿ ಚಲಿಸುತ್ತಿರುವ ವೇಳೆ ವಿದ್ಯಾರ್ಥಿನಿ ಇಳಿಯುವ ಪ್ರಯತ್ನ ಮಾಡಿದ್ದಾಳೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ತಕ್ಷಣ ವಿದ್ಯಾರ್ಥಿನಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಬಸ್ ಚಾಲಕ, ನಿರ್ವಾಹಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ : ವಿದ್ಯಾರ್ಥಿನಿ ಸಾವಿಗೆ ಬಸ್ ಚಾಲಕ, ನಿರ್ವಾಕರ ಮೇಲೆ ಕ್ರಮ ಜರುಗಿಸಬೇಕೆಂದು ಎಬಿವಿಪಿ ಪದಾಧಿಕಾರಿಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. 

ಎಬಿವಿಪಿ ನಗರ ಘಟಕದ ಅಧ್ಯಕ್ಷ ಸೊಪಿನ ರವಿ, ಸಂಚಾಲಕ ಕೊಟ್ರೇಶ ಕಲಿಕೇರಿ, ವಿದ್ಯಾರ್ಥಿಗಳಾದ ಮನೋಜ್, ಶಿವು, ವಿವೇಕ, ರಾಕೇಶ, ಧನುಷ, ವರುಣ ಅವರು ಇದ್ದರು. ತಹಶೀಲ್ದಾರ ಕೆ.ಶರಣಮ್ಮ ಸ್ಥಳಕ್ಕೆ ಭೇಟಿ ನೀಡಿ ವಾಹನ ನಿಲುಗಡೆಗೆ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು. 


ಸುದ್ದಿ ಓದಿ