ಮಠ-ಮಾನ್ಯಗಳು ಧಾರ್ಮಿಕ ಆಚರಣೆ ಜತೆಗೆ ಅನ್ನ,ಅಕ್ಷರ ಕ್ರಾಂತಿ
ಲೋಕದರ್ಶನ ವರದಿ
ಹೂವಿನಹಡಗಲಿ ಅ.10: ರಾಜ್ಯದ ಮಠ-ಮಾನ್ಯಗಳು ಕೇವಲ ಧಾರ್ಮಿಕ ಆಚರಣೆಗೆ ಜತೆಗೆ ಬದಲಾಗಿ, ಶಿಕ್ಷಣ, ಸಾಮಾಜಿಕ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ನೀಲಗುಂದ ಗುಡ್ಡದ ಸಂಸ್ಥಾನದ ಚೆನ್ನಬಸವ ಶಿವಯೋಗಿ ಸ್ವಾಮೀಜಿ ಹೇಳಿದರು.ಪಟ್ಟಣದ ಹಿರೇಮಲ್ಲನಕೆರೆ ಮಠದಲ್ಲಿ ಆಯೋಜಿಸಿದ್ದ ಹಾನಗಲ್ಲ ಕುಮಾರ ಶಿವಯೋಗಿಗಳ 159ನೇ ಜಯಂತಿ ಮತ್ತು ಲಿಂ. ಚನ್ನಬಸವ ಸ್ವಾಮೀಜಿ ಅವರ 39ನೇ ಸಂಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಮಾಡುವ ಕೆಲಸಗಳನ್ನು ವೀರಶೈವ ಮಠಗಳು ನಾಡಿನಲ್ಲಿ, ಅನ್ನ, ಅಕ್ಷರ ದಾಸೋಹದ ಮೂಲಕ ಸಮಾಜದಲ್ಲಿ ಶಿಕ್ಷಣದ ಬಹುದೊಡ್ಡ ಕ್ರಾಂತಿ ಮಾಡಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಬೆಳಕನ್ನು ನೀಡುತ್ತಿವೆ. ಮಠಗಳು ಸಂಸ್ಕೃತ ಪಾಠಶಾಲೆಗಳಾಗಿ ಉಳಿಯದೇ, ಸಮಾಜದಲ್ಲಿನಅಸಮಾನತೆ, ಜಾತಿ ವ್ಯವಸ್ಥೆ, ಅಜ್ಞಾನ, ಮೂಢನಂಬಿಕೆ ಸೇರಿದಂತೆ, ಸಮಾಜವನ್ನು ಸರಿದಾರಿಗೆ ತರುವ ಕೆಲಸದಲ್ಲಿ ತೊಡಗಿವೆ. ಶಿಕ್ಷಣದಿಂದ ಸಮಾನತೆ, ಸಹಬಾಳ್ವೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವಂತಹ ಕೆಲಸ ಮಾಡುತ್ತಿವೆ ಎಂದರು.
ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಸೋಗಿ ಪುವರ್ಗಮಠದ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಹಿರೇಮಲ್ಲಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಹೊಳಲಿನ ಮಲ್ಲಿಕಾರ್ಜುನ ದೇವರು, ಕೋಡಿಹಳ್ಳಿ ಮುದುಕಪ್ಪ, ಅಟವಾಳಗಿ ಕೊಟ್ರೇಶ್, ಪಿ.ಟಿ. ಭರತ್ ಸೇರಿದಂತೆ ಇತರರಿದ್ದರು.