ಗ್ರೇಡರ್ ವಾಹನ ಹಾಯ್ದು ವಿದ್ಯಾರ್ಥಿ ಸಾವು
ಗುಳೇದಗುಡ್ಡ 06: ಪಟ್ಟಣದಲ್ಲಿ ರಸ್ತೆ ನಿರ್ಮಾಣ ಮಾಡುವ ಗ್ರೇಡರ್ ವಾಹನ ಹಾಯ್ದು 8ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಭರತ್ ಸಿದ್ದಪ್ಪ ಕುಂಬಾರ (14) ಮೃತ ಬಾಲಕ. ಸ್ಥಳೀಯ ಪವಾರ್ಕ್ರಾಸ್ ಹತ್ತಿರ ನಿರ್ಲಕ್ಷ್ಯತನದಿಂದ ಗ್ರೇಡರ್ ವಾಹನ ಚಲಾಯಿಸಿದ್ದರಿಂದ ಸೈಕಲ್ ಮೇಲೆ ಹೊರಟಿದ್ದ ವಿದ್ಯಾರ್ಥಿ ಮೇಲೆ ಹಾಯ್ದಿದೆ. ವಾಹನಕ್ಕೆ ಸಿಲುಕಿ ಮಗು ಅಪ್ಪಚ್ಚಿಯಾಗಿದೆ. ಚಾಲಕ ಸ್ಥಳದಲ್ಲಿಯೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸೈ ಪುಂಡಲೀಕ ಪಟಾತರ ತಿಳಿಸಿದ್ದಾರೆ.
ಸಾರ್ವಜನಿಕರ ಒತ್ತಾಯ: ನಿತ್ಯ ಸಾವಿರಾರು ವಾಹನ ಸಂಚರಿಸುವ ಪಟ್ಟಣದ ಪ್ರಮುಖ ರಸ್ತೆಯಾಗಿರುವ ಪವಾರಕ್ರಾಸ್ ಬಹಳ ಇಕ್ಕಟ್ಟಾಗಿದ್ದು, ಅಗಲೀಕರಣ ಮಾಡುತ್ತಿಲ್ಲ. ರಾಜಕೀಯ ಇಚ್ಚಾಶಕ್ತಿಯ ಕೊರತೆಗೆ ನಿತ್ಯ ಒಂದಿಲ್ಲ ಒಂದು ದುರ್ಘಟನೆಗಳು ಈ ಸ್ಥಳದಲ್ಲಿ ನಡೆಯುತ್ತಿವೆ. ಜನಪ್ರತಿನಿಧಿಗಳು ಆದಷ್ಟು ಬೇಗ ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.