ಗುಳೇಗುಡ್ಡ

ಜನತಾ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಕ್ರಮ: ಕುಲಕರ್ಣಿ

ಜನತಾ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಕ್ರಮ: ಕುಲಕರ್ಣಿ
ಗುಳೇದಗುಡ್ಡ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ಕೋವಿಡ್ ಜನತಾ ಕರ್ಫ್ಯೂ ಪಾಲನಾ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ

ಗುಳೇದಗುಡ್ಡ,ಏ.23 : ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಿದ್ದೂ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಇರುವ ಜನತಾ ಕರ್ಫ್ಯೂವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಟ್ಟುನಿಟ್ಟಾಗಿ ಸಾರ್ವಜನಿಕರು ಪಾಲಿಸದಿದ್ದರೆ ಕಟ್ಟುನಿಟ್ಟಿನ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದೆಂದು ತಹಸೀಲ್ದಾರ್ ಜಿ.ಎಂ.ಕುಲಕರ್ಣಿ ತಿಳಿಸಿದ್ದಾರೆ. 

ತಾಲೂಕಾ ಆಡಳಿತ ಕಚೇರಿಯಲ್ಲಿ ಶುಕ್ರವಾರ ಸಾಯಂಕಾಲ ಕರೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗಿನಜಾವ 6 ಗಂಟೆವರೆಗೆ ಜನತಾ ಕರ್ಫ್ಯೂ ಹೊರಡಿಸಲಾಗಿದ್ದೂ ತಾಲೂಕಿನ ಎಲ್ಲ ನಾಗರಿಕರು ಆದೇಶವನ್ನು ಪಾಲಿಸಿ ಕೋವಿಡ್ ನಿಯಂತ್ರಿಸಲು ತಾಲೂಕಾ ಆಡಳಿತದೊಂದಿಗೆ ಸಹಕರಿಸಬೇಕು. ಮೇ 20ರವರೆಗೆ ಕಂದಾಯ, ತಾಪಂ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ರಜೆ ನೀಡುವುದಿಲ್ಲವೆಂದರು.  

ತಾಲೂಕಾ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ಸಿದ್ದಪ್ಪ ನಕ್ಕರಗುಂದಿ ಮಾತನಾಡಿ, ವಿವಾಹದಲ್ಲಿ 50 ಜನ, ಶವಸಂಸ್ಕಾರದಲ್ಲಿ 20 ಜನ ಮಾತ್ರ ಪಾಲ್ಗೊಳ್ಳಬೇಕು. ಈ ನಿಯಮ ಮೀರಿದ ಸಂಬಂಧಪಟ್ಟವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಪಿಡಿಓ ಹಾಗೂ ಪಟ್ಟಣ ಮಟ್ಟದಲ್ಲಿ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಸಮಿತಿಯನ್ನು ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ ಎಂದರು. 

ಸಿಪಿಐ ರಮೇಶ ಹಾನಾಪೂರ ಮಾತನಾಡಿ, ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಜನತಾ ಕರ್ಫ್ಯೂ ಇದ್ದೂ, ಹಾಲಿನ ಅಂಗಡಿ, ತರಕಾರಿ, ಓಷಧಿ ಅಂಗಡಿಗಳು, ಕಿರಾಣಿ ವಸ್ತು, ಕೃಷಿ ಪೂರಕ ವಸ್ತುಗಳ ಅಂಗಡಿಗಳು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ತೆರೆದಿರುತ್ತವೆ.   ಅಗತ್ಯವಿದ್ದವರು ಮಾತ್ರ ಮಾಸ್ಕ್‌ ಧರಿಸಿ ಅಂಗಡಿಗಳಿಗೆ ಬಂದು ವಸ್ತುಗಳನ್ನು ಖರೀದಿಸಬೇಕು. ಅನಗತ್ಯವಾಗಿ  ರಸ್ತೆ ಮೇಲೆ ಬರುವಂತಿಲ್ಲ. ವಿವಾಹಕ್ಕೆ ಪರವಾನಗಿ ಪಡೆಯಬೇಕು. ಇಲ್ಲದಿದ್ದರೆ ಎಫ್‌ಆರ್‌ಐ ಮಾಡಲಾಗುತ್ತದೆ. ವಿವಾಹದಲ್ಲಿ, ಶವಸಂಸ್ಕಾರದಲ್ಲಿ ನಿಯಮಾನುಸಾರ ಭಾಗವಹಿಸುವವರ ಸಂಖ್ಯೆ ಮೀರಿದರೆ ಏಫ್‌ಆರ್‌ಐ ಮಾಡಲಾಗುತ್ತದೆ ಎಂದರು. 

ಪಿಎಸ್‌ಐ ಪಟಾತರ್, ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಉಪತಹಸೀಲ್ದಾರ ವೀರೇಶ ಬಡಿಗೇರ, ಕಂದಾಯ ನೀರೀಕ್ಷಕ  ಮಹಾಂತೇಶ ಅಂಗಡಿ,  ತುಪ್ಪದ, ತಾಲೂಕಿನ ಪಿಡಿಓಗಳು, ಗ್ರಾಮಲೆಕ್ಕಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 


ಸುದ್ದಿ ಓದಿ