ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ನಾಗರಾಳ ಎಚ್ಚರಿಕೆ
ಬೈಲಹೊಂಗಲ 23: ಕರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವದರಿಂದ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವದಾಗಿ ತಹಶೀಲ್ದಾರ ಬಸವರಾಜ ನಾಗರಾಳ ಎಚ್ಚರಿಕೆ ನೀಡಿದರು. ಅವರು ಬುಧವಾರ ಪಟ್ಟಣದ ಸಂತೆ ನಡೆಸುವ ಸ್ಥಳಗಳನ್ನು ಪರಿಶೀಲನೆ ನಡೆಸಿ, ರಸ್ತೆಯಲ್ಲಿ ಮಾಸ್ಕ ಧರಿಸದೇ ಓಡಾಡಿತ್ತ ವ್ಯಕ್ತಿಗಳಿಗೆ ದಂಡವಿಧಿಸಿದರು. ಒಟ್ಟು 163 ಜನ, ವಾಹನ ಸವಾರರ ಹಾಗೂ ಪಾದಚಾರಿಗಳಿಂದ 16300 ರೂ. ದಂಡ ವಸೂಲಿ ಮಾಡಿ ಬಿಸಿ ಮುಟ್ಟಿಸಿದರು. ತಹಶೀಲ್ದಾರ ಬಸವರಾಜ ನಾಗರಾಳ, ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗರಾಳ, ಸಿಪಿಐ ದಿನೇಶ ಪಾಟೀಲ, ಪಿಎಸ್ಐ ಎಸ್.ಬಿ. ಮಾವಿನಕಟ್ಟಿ ಹಾಗೂ ಸಿಬ್ಬಂದಿ ತಂಡ ಪಟ್ಟಣದ ಎಪಿಎಂಸಿಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲವರೆಗಿನ ಪ್ರಮುಖ ರಸ್ತೆಯಲ್ಲಿ ಮಾಸ್ಕ್ ಧರಿಸಿದ ಜನರನ್ನು ತಡೆದು ದಂಡ ವಿಧಿಸಲಾಯಿತು.
ತಹಶೀಲ್ದಾರ ಬಸವರಾಜ ನಾಗರಾಳ ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ ಅವರೊಂದಿಗೆ ಸಮಾಲೋಚಿಸಿ, ಪಟ್ಟಣದ ಪುರಸಭೆಯಿಂದ ಜರುಗುತ್ತಿದ್ದ ಶುಕ್ರವಾರ, ಸೋಮವಾರ, ಬುಧವಾರ ಸಂತೆಗಳನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನ ಮಂದಿರ, ಮಸೀದಿ, ಚರ್ಚಗಳಲ್ಲಿನ ಸಾಮೂಹಿಕ ಪ್ರಾರ್ಥನೆ, ಜಾತ್ರೆ, ಸಭೆ, ಸಮಾರಂಭಗಳನ್ನು ರದ್ದುಪಡಿಸಲಾಗಿದೆ ಎಂದರಲ್ಲದೆ ಕೇವಲ ಪೂಜಾ ವಿಧಿವಿಧಾನ ಜರುಗಿಸಬಹುದಾಗಿದೆ. ಇಕ್ಕಟ್ಟಿನ ಜಾಗೆಯಲ್ಲಿ ಜರುಗುವ ಸಂತೆಗಳನ್ನು ಬಯಲು ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮಜರುಗಿಸಲಾಗಿದೆ. ಹೊಟೇಲ, ಬಾರ್ ಮತ್ತು ರೆಸ್ಟೋರೆಂಟಗಳಲ್ಲಿ ಗುರುವಾರದಿಂದ ಮುಂಜಾನೆ 6 ರಿಂದ ರಾತ್ರಿ 9 ಗಂಟೆವರೆಗೆ ಕೇವಲ ಪಾರ್ಸಲ್ ವ್ಯವಸ್ಥೆ ಮಾತ್ರ ಇರುತ್ತದೆ. ಮದುವೆಗಳಿಗೆ ಅನುಮತಿ ಮೂಲಕ ಕೇವಲ 50 ಜನರಿಗೆ ಅವಕಾಶ ಕಲ್ಪಿಸಿ ಪಾಸ್ ವಿತರಿಸಲಾಗುತ್ತಿದ್ದು, ಖಣ್ಗಾವಲು ತಂಡ ನಿಗಾ ಇಡಲಿದೆ ಎಂದರು.ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನೈಟೈಜರ್ ಬಳಕೆ ಮಾಡಬೇಕು ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವದು ಎಂದರು.ಬೈಲಹೊಂಗಲ ಪಟ್ಟಣದಲ್ಲಿ ಜರುಗುವ ಸಂತೆಗಳನ್ನು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಜರುಗಿಸಲು ಸ್ಥಳ ಪರಿಶೀÀಲನೆ ಮಾಡುತ್ತಿರುವ ಅಧಿಕಾರಿಗಳು.