ಏಳನೇ ವೇತನ ಆಯೋಗ ಜಾರಿಗೆ ರಾಜ್ಯ ಸರಕಾರಿ ನೌಕರರ ಒತ್ತಾಯ
ಕಾಗವಾಡ,12: ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ, ಸರ್ಕಾರ ಆದೇಶ ಮಾಡಬೇಕೆಂದು ಆಗ್ರಹಿಸಿ, ಗುರುವಾರ ದಿ. 11 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಾಗವಾಡ ಘಟಕದ ವತಿಯಿಂದ ಉಗಾರ ಖುರ್ದ ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕ ರಾಜು ಕಾಗೆಯವರ ಮೂಲಕ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಗೌಡಪ್ಪ ಸಡ್ಡಿ ಮಾತನಾಡಿ, ರಾಜ್ಯದ ಎಲ್ಲಾ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ ಹಾಗೂ 183 ತಾಲೂಕುಗಳಲ್ಲಿ ಸಂಘದ ಶಾಖೆಗಳನ್ನು ಹೊಂದಿದ್ದು, 6 ಲಕ್ಷ ರಾಜ್ಯ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆಯಾಗಿದೆ. ಕೂಡಲೇ ರಾಜ್ಯ ಸರ್ಕಾರ ನಮ್ಮ ಪ್ರಮುಖ ಮೂರು ಬೇಡಿಕೆಗಳಾದ 7ನೇ ವೇತನ, ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು. ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾವನ ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರೀಗಣಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ತಹಸೀಲ್ದಾರ ರಾಜೇಶ ಬುರ್ಲಿ ಮಾತನಾಡಿ, ಕಾಗವಾಡ ಹಾಗೂ ಅಥಣಿ ಶಾಸಕದ್ವಯರು, ಪ್ರಭಾವಿ ಶಾಸಕರುಗಳಾಗಿದ್ದೀರಿ. ನೀವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರೆ ಸಾಕು, ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ಖಂಡಿತವಾಗಿ ಈಡೇರುತ್ತವೆ. ಅದಕ್ಕಾಗಿ ನಮ್ಮ ಮನವಿಯನ್ನು ಸ್ವೀಕರಿಸಿ, ನೌಕರರ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿದರು.
ಈ ವೇಳೆ ಶಾಸಕ ರಾಜು ಕಾಗೆ, ನೌಕರರ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿ, ನಿಮ್ಮ ಬೇಡಿಕೆಗಳು ಖಂಡಿತವಾಗಿಯೂ ಸೂಕ್ತವಾಗಿವೆ. ಅವು ಹಾಗೇ ಉಳಿದಿವೆ. ಒಬ್ಬ ನೌಕರನ ಮೇಲೆ ಇಡೀ ಕುಟುಂಬ ಅವಲಂಬಿತವಾಗಿರುತ್ತದೆ. ಆತನ ನಿವೃತ್ತಿ ನಂತರ ಆತನ ಕುಟುಂಬ ನಿರ್ವಹಿಸಲು ಸರ್ಕಾರ ಪಿಂಚಣಿ ನೀಡುವುದು ಅತ್ಯವಶ್ಯಕವಾಗದೆ. ಅನೇಕ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿವೆ. ನೌಕರರಿಗೆ ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು ಅತ್ಯಂತ ಸೂಕ್ತವಾಗಿದೆ. ನಾನು ಪೆಭ್ರುವರಿಯಲ್ಲಿ ನಡೆಯಲಿರುವ ಬಜಟ್ ಅಧಿವೇಶನದಲ್ಲಿ ನಿಮ್ಮ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಗಮನ ಸೆಳೆದು, ನಿಮಗೆ ನ್ಯಾಯ ಕೊಡಿಸುವುದಾಗಿ ಶಾಸಕ ಭರವಸೆ ನೀಡಿದರು.
ವೇಳೆ ತಹಸೀಲ್ದಾರ ರಾಜೇಶ ಬುರ್ಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೌಡಪ್ಪ ಸಡ್ಡಿ, ತಾಲೂಕಾ ಪಂಚಾಯತ್ ಎಇಓ ವೀರಣ್ಣ ವಾಲಿ, ಸಿಡಿಪಿಓ ಸಂಜೀವಕುಮಾರ ಸದಲಗೆ, ಅಣ್ಣಾಸಾಬ ಕೋರೆ, ಗೌತಮ್ ಶಿರಗಾಂವೆ, ಎ.ಬಿ. ಶಮನೇವಾಡಿ, ಎಂ.ಎಲ್. ಹವಳೆಗೋಳ, ಬಿ.ಎಸ್. ಹೂವಣ್ಣವರ, ಎಸ್.ಎಸ್. ಕೋಳಿ, ಎಂ.ಜಿ. ಸಂಕಪಾಳ, ಆರ್.ಎಂ. ತೆವರಟ್ಟಿ, ಡಿ.ಆರ್. ಜಾಧವ, ರಾಮ್ ಪಾಟೀಲ, ಎಂ.ಜೆ. ಮಾಲಗಾಂವೆ, ಭರತ ಬಿಲವಾಡೆ, ಸಿ.ಎಂ. ಸಂತೋಷ, ಎಂ.ಎಂ. ಖೆಲಾರಿ, ಡಿ.ಕೆ. ಗುಪ್ತೆ, ಎಸ್.ಬಿ. ಕುಪವಾಡೆ, ಎ.ಡಿ. ಖಾತೆದಾರ, ಎಂ.ಕೆ. ಕಾಂಬಳೆ, ಎಂ.ಟಿ. ತಳವಾರ, ನೂತನ ಯಾದವ, ಜಯಶ್ರೀ ಹೊನಕಾಂಬಳೆ ಸೇರಿದಂತೆ ನೂರಾರು ನೌಕರರು ಉಪಸ್ಥಿತರಿದ್ದರು.