ರಾಣೆಬೆನ್ನೂರ

ಕಾರ್ಮಿಕರ ರಾಜ್ಯ ಸಮಾವೇಶವನ್ನು ಆಗಸ್ಟ್‌ 18 ರಂದು ಸಂಘಟಿಸಲಾಗುತ್ತಿದೆ: ಮಹೇಶ ಪತ್ತಾರ

ಕಾರ್ಮಿಕರ ರಾಜ್ಯ ಸಮಾವೇಶವನ್ನು ಆಗಸ್ಟ್‌ 18 ರಂದು ಸಂಘಟಿಸಲಾಗುತ್ತಿದೆ: ಮಹೇಶ ಪತ್ತಾರ

ರಾಣಿಬೆನ್ನೂರು,6: ಕನಿಷ್ಟ ವೇತನ, ಭವಿಷ್ಯನಿಧಿ, ಇಎಸ್‌ಐ, ಬೋನಸ್, ಪಿಂಚಣಿ ಮುಂತಾದ ಕಾರ್ಮಿಕ ಸಾಮಾಜಿಕ ಭದ್ರತಾ ಸೌಲಭ್ಯಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಸಿಐಟಿಯು ನೇತೃತ್ವದಲ್ಲಿ ಮಿಲ್ ಗೋಡೌನ್ ವೇರ್‌ಹೌಸ್ ಹಮಾಲಿ ಕಾರ್ಮಿಕರ ರಾಜ್ಯ ಸಮಾವೇಶವನ್ನು ಬಳ್ಳಾರಿ ಜಿಲ್ಲಾ ಸಿರಗುಪ್ಪದಲ್ಲಿ ಆಗಸ್ಟ್‌ 18 ರಂದು ಸಂಘಟಿಸಲಾಗುತ್ತಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು. 

ನಗರದ ಎಪಿಎಂಸಿಯಲ್ಲಿ ನಡೆದ ಹಮಾಲಿ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪೋಷ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು,  ರಾಜ್ಯದಲ್ಲಿ ಸರಿಸುಮಾರು ಐದು ಸಾವಿರದಷ್ಟು ಅಕ್ಕಿ, ಅಡುಗೆ ಎಣ್ಣೆ, ಬೆಳೆ, ರವಾ ಮುಂತಾದ ಮಿಲ್(ಗಿರಣಿ)ಗಳಲ್ಲಿ ಅಗತ್ಯ ಮೂಲ ಧಾನ್ಯಗಳ ಸಂಗ್ರಹ ಮತ್ತು ಸಂಸ್ಕರಿಸಿದ ಉಪ ಉತ್ಪಾದನೆಗಳ ಲೋಡಿಂಗ್ ಅನ್‌ಲೋಡಿಂಗ್ ಕೆಲಸದಲ್ಲಿ ನಿರತರಾಗಿದ್ದೇವೆ ಎಂದರು. 

ಇನ್ನೊಂದಡೆ ಕೆಎಫ್‌ಸಿಎಸ್‌ಸಿ (ಅನ್ಯಭಾಗ್ಯ), ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಸೆಂಟ್ರಲ್ ವೇರಹೌಸ್ (ಸಿಡಬ್ಲೂಸಿ), ಭಾರತ ಆಹಾರ ನಿಗಮ (ಎಫ್‌ಸಿಐ), ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್), ರೈಲ್ವೇ ಗೂಡ್ಸಶೆಡ್, ಕೆಎಂಎಫ್, ಕೆಓಎಫ್, ಕರ್ನಾಟಕ ಬೀಜ ನಿಗಮ, ವಿವಿಧ ಕೋಲ್ಡ್‌ ಸ್ಟೋರೇಜ್ ಸೇರಿದಂತೆ ನೂರಾರು ಸರಕಾರಿ ಸ್ವಾಮ್ಯದ ಗೋಡೌನ್, ವೇರ್‌ಹೌಸ್‌ಗಳಲ್ಲಿ ಹಾಗೂ ವಿವಿಧ ಕಂಪನಿಗಳ ಖಾಸಗಿ ಗೋಡೌನ್, ವೇರ್‌ಹೌಸ್‌ಗಳಲ್ಲಿ ಲೋಡಿಂಗ್ ಅನ್‌ಲೋಡಿಂಗ್ ಕೆಲಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಮಾಲಿ ಕಾರ್ಮಿಕರು ತೊಡಗಿಕೊಂಡಿದ್ದಾರೆ ಎಂದರು. 

ಇಂತಹ ಜೀವನಾವಶ್ಯಕ ವಸ್ತುಗಳು ಸೇರಿದಂತೆ ಸರಕು ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಸಂಘಟಿತ ಹಮಾಲಿ ಕಾರ್ಮಿಕರು ರಟ್ಟೆಯ ಬಿಟ್ಟರೇ ಆಸ್ತಿಯೇ ಇಲ್ಲದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಶ್ರಮಜೀವಿಗಳಾದ ಇವರು ಮಾಲೀಕರು, ಗುತ್ತಿಗೆದಾರರು, ಹಾಗೂ ಸರಕಾರದಿಂದ ನಿಷ್ಕಾಳಜಿಗೆ ಒಳಗಾಗಿರುವ ಸಮುದಾಯವಾಗಿದೆ. ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಹಲವು ವರ್ಷಗಳಿಂದ ಸಂಘಟಿತರಾದ ಹಮಾಲಿ ಕಾರ್ಮಿಕರು ತಮ್ಮ ಬದುಕಿನ ಪ್ರಶ್ನೆಗಳಿಗಾಗಿ ಹತ್ತು ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದ್ದರಿಂದ ಅಲ್ಪಸ್ವಲ್ಪ  ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದರು ಇನ್ನೂ ಪ್ರಮುಖ ಬೇಡಿಕೆಗಳು ನೆನಗುದಿಗೆ ಬಿದ್ದಿವೆ ಎಂದರು. 

ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಹಮಾಲಿ ಸಂಘದ ಮುಖಂಡರಾದ ಮಲ್ಲೇಶಪ್ಪ ಮದ್ಲೇರ್, ನಾಗಪ್ಪ ಚನ್ನಕೇರಿ, ಪರಶಪ್ಪ ಹೆಳವಾರ, ಬಸವರಾಜ  ಗಾಳಿ, ಮಲ್ಲೇಶ್ ಚಿಮ್ಮೂಲಗಿ, ಮುತ್ತು, ಚಿಗುರಿ, ಹನುಮಂತ ಯರ್ಜರಿ, ಬಸವರಾಜ ಎಸ್, ಗುಡ್ಡಪ್ಪ ಮಡಿವಾಳರ ಉಪಸ್ಥಿತರಿದ್ದರು. 


ಸುದ್ದಿ ಓದಿ