ಶೀಘ್ರ ರಾಜ್ಯ ಹೆದ್ದಾರಿ ದ್ವಿಪಥ ರಸ್ತೆ, ವಿದ್ಯುತ್ ದೀಪಗಳ ಅಳವಡಿಕೆ: ಸಂಸದ ಜೊಲ್ಲೆ ಭರವಸೆ
ಅಥಣಿ 05: ಮುರುಗುಂಡಿ ಗ್ರಾಮದ ಮೂಲಕ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ತಂಗಡಿ ಗ್ರಾಮದವರೆಗೆ ಒಂದು ಕಿಲೋಮೀಟರ ರಸ್ತೆ ಇದ್ದು ಅದನ್ನು ದ್ವಿಪಥ ರಸ್ತೆಯನ್ನಾಗಿ ಮಾಡಿ ವಿದ್ಯುತ್ ದೀಪಗಳ ಅಳವಡಿಕೆ ಶೀಘ್ರದಲ್ಲಿ ಮಾಡುವುದಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಶ್ವಾಸನೆ ನೀಡಿದರು.
ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಜರುಗಿದ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಅವರು ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ, ಗ್ರಾಮಕ್ಕೆ ಬೇಕಾದ ಅವಶ್ಯಕತೆಗಳ ಕುರಿತಾಗಿ ಚರ್ಚಿಸಿದರು. ಮುರುಗುಂಡಿ ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾದ ಪಶುವೈದ್ಯಕೀಯ ಆಸ್ಪತ್ರೆಯ ಕುರಿತಾಗಿಯೂ ಚರ್ಚಿಸಿದ ಅವರು ಸುತ್ತಲಿನ ಎಳೆಂಟು ಗ್ರಾಮಗಳಿಗೆ ಮುರುಗುಂಡಿ ಪಶು ಆಸ್ಪತೆ ಕೇಂದ್ರವಾಗುವುದರಿಂದ ಪಶುವೈದ್ಯಕೀಯ ಆಸ್ಪತ್ರೆಯನ್ನೂ ಸಹ ಪ್ರಾರಂಭಿಸುವುದಾಗಿ ಭರವಸೆ ನೀಡಿದರು. ಅದಲ್ಲದೆ ತೋಟ ಪಟ್ಟಿಗಳಲ್ಲಿ ಹಾಯ್ದು ಹೋಗುವ ದಾರಿಗಳನ್ನು ಎನ್ಆರ್ಜಿ ಅಡಿಯಲ್ಲಿ ಅಭಿವೃದ್ಧಿಗೊಳಿಸುವುದಾಗಿ ಹೇಳಿದರು.
ಅಥಣಿ ಶಾಸಕ ಮಹೇಶ ಕುಮಠಳ್ಳಿ ಉಪಸ್ಥಿತರಿದ್ದು ಮಾತನಾಡಿ ಸಂಸದರ ಹಾಗೂ ಶಾಸಕರ ಪ್ರಯತ್ನದಿಂದ ಗ್ರಾಮಗಳ ಅಭಿವೃದ್ಧಿಗೆ ಬೇಕಾದ ಎಲ್ಲ ಕಾರ್ಯಗಳನ್ನು ಯೋಜನೆಗಳನ್ನು ಪ್ರಾರಂಭಿಸಿ ಕಡಿಮೆ ಸಮಯದಲ್ಲಿ ಯೋಜನೆಗಳು ಜನರ ಉಪಯೋಗಕ್ಕೆ ಬರುವಂತೆ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ ಅವರು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡುವುದರೊಂದಿಗೆ ಸುಂದರ ಗ್ರಾಮ ನಿರ್ಮಾಣಕ್ಕೂ ಸಹ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಧುರೀಣರಾದ ಶ್ರೀಶೈಲ ನಾಯಕ, ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಪಾಟೀಲ, ಗ್ರಾಮ ಪಂಚಾಯತ ಸದಸ್ಯರಾದ ಭರಮಾ ಮಗಾಡಿ, ಚಂದು ನಂದಿವಾಲೆ, ಗ್ರಾಮಸ್ಥರಾದ ಸಿದರಾಯ ಕಾಳೇಲಿ, ಭೀಮು ಸಡ್ಡಿ, ಸುನೀಲ ಪವಾರ, ಭೀಮು ಕರಸಿದ್ದಗೋಳ, ವಿಶ್ವಾಸ ಪವಾರ, ಬಾಳಪ್ಪ ಬಾಳೀಗೇರಿ, ಶ್ರೀಮಂತ ಕಾಟಕರ, ಮುರಗೆಪ್ಪ ಕನಕರೆಡ್ಡಿ, ತವನಪ್ಪ ಮಹಿಷವಾಡಗಿ, ಕುಮಾರ ಪಾಟೀಲ, ವಿಜಯ ಕುಳಲಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಸನಾಳ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.