ಹೂವಿನ ಹಡಗಲಿ

ಹಾಲಸ್ವಾಮಿ ಜಾತ್ರೆಗೆ ಚಾಲನೆ, 30ಕ್ಕೆ ಮುಳ್ಳುಗದ್ದುಗೆ ಮಹೋತ್ಸವ

ಹಾಲಸ್ವಾಮಿ ಜಾತ್ರೆಗೆ ಚಾಲನೆ, 30ಕ್ಕೆ ಮುಳ್ಳುಗದ್ದುಗೆ ಮಹೋತ್ಸವ

ಹಿರೇಹಡಗಲಿ ಕರಿಗಲ್ಲು ಪ್ರತಿಷ್ಠಾಪನೆ, ರುದ್ರಹೋಮ, ವಿಶೇಷ ಪೂಜೆ  

ಹೂವಿನಹಡಗಲಿ ಅ.25: ಪ್ರತಿ ವರ್ಷದಂತೆ ತಾಲೂಕಿನ ಹಿರೇಹಡಗಲಿ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ,ಗುರುಪಾದ ದೇವರಮಠದ ಐತಿಹಾಸಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಗಳವರ ಜನ್ಮ ಸುವರ್ಣ ಮಹೋತ್ಸವ ಮತ್ತು ಗ್ರಾಮದ ಕರಗಲ್ಲು ಪ್ರತಿಷ್ಠಾಪನೆ ಸೇರಿದಂತೆ ನಾನಾ ಧಾರ್ಮಿಕ ,ಸಾಮಾಜಿಕ ಹಾಗೂ ಜನ ಜಾಗೃತಿ ಕಾರ್ಯಕ್ರಮಗಳನ್ನು ಅ.20ರಿಂದ ನ.2ರವರೆಗೆ ನಡೆಯಲಿವೆ ಎಂದು ಶ್ರೀಮಠದ ಸಣ್ಣ ಹಾಲಸ್ವಾಮೀಜಿ ಹೇಳಿದರು.  

ಶುಕ್ರವಾರ ಬೆಳಿಗ್ಗೆ ಗ್ರಾಮದಲ್ಲಿ ನೂತನ ಕರಿಗಲ್ಲು ಪ್ರತಿಷ್ಠಾಪನೆ ಮತ್ತು ಗ್ರಾಮದ ಹಳೆ ಕರಿಗಲ್ಲುಗೆ ವಿಶೇಷ ಪೂಜೆ,ಶಾಂತಿ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.ನಂತರ ಮಠದಲ್ಲಿ ಮೊದಲನೇ ಸದ್ಗುರು ಶಿವಯೋಗಿ ಹಾಲ ವೀರಾರ್ಯಾ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ, ರಾಮಲಿಂಗ ದೇವರಿಗೆ,ದ್ಯಾಮವ್ವ ದೇವಿಗೆ ,ಹಿರಿಯ ಗುರುಗಳ ಗುರುಮಾತೆಯರ ಗದ್ದುಗೆಗೆ ಮಹಾರುದ್ರಾಭಿಷೇಕ,ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. 11ದಿನಗಳವರೆಗೆ ಏಕಾದಶ ರುದ್ರ ಹೋಮ, ಸಂಜೆ ಅಳವಂಡಿ ಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ಜೀವನ ದರ್ಶನ ಆಧ್ಯಾತ್ಮ ಪ್ರವಚನ ನಡೆಯಲಿದೆ ಎಂದರು. 

ಸಾಧಕರಿಗೆ ಸನ್ಮಾನ : ಇತಿಹಾಸ ಪರಂಪರೆ ಹೊಂದಿರುವ ಜಾತ್ಯತೀತತೆಯ ಸಂಕೇತವಾಗಿರುವ ಹಾಲಸ್ವಾಮಿಗಳ ಮಠದ ಜಾತ್ರೆ ಈ ಬಾರಿ ವಿಶೇಷವಾಗಿ ಆಚರಿಸಲಾಗುತ್ತದೆ. ಮಠದ ಸ್ವಾಮೀಜಿಗಳಲ್ಲಿ ಒಬ್ಬರಾದ ಸಣ್ಣ ಹಾಲಸ್ವಾಮೀಜಿಗಳ ತಮ್ಮ 50ನೇ ವರ್ಷದ ಜನ್ಮದಿನದ ಸುವರ್ಣ ಮಹೋತ್ಸವದ ಆಚರಿಸಿಕೊಳ್ಳಲಿದ್ದು, ಜಾತ್ರೆ ಮಹೋತ್ಸವದಲ್ಲಿ ನಾನಾ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಯೋಧರಿಗೆ,ಪ್ರಗತಿಪರ ರೈತರಿಗೆ, ನಿವೃತ್ತ ಶಿಕ್ಷಕರಿಗೆ, ಸಮಾಜ ಸೇವಕರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದು. 

30ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ : ಇದೇ ತಿಂಗಳು 30ರಂದು ರಾತ್ರಿ 10.30ಕ್ಕೆ ಶ್ರೀಮಠದ ಐತಿಹಾಸಿಕ ಪರಂಪರೆಯ ಹೊಂದಿರುವ ಶ್ರೀಸಣ್ಣ ಹಾಲಸ್ವಾಮಿಗಳಿಂದ ಮುಳ್ಳುಗದ್ದುಗೆ ಉತ್ಸವ ನೆರವೇರಲಿದೆ. 31ರಂದು ರಂದು ಸಂಜೆ 5ಕ್ಕೆ ರಥೋತ್ಸವ, ರಾತ್ರಿ ಧರ್ಮ ಸಭೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನ.1ರಂದು ಬೆಳಿಗ್ಗೆ ವಟುಗಳಿಗೆ ಶಿವದೀಕ್ಷೆ, ಬೆ.11.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹಗಳು, ಸಂಜೆ 4ಕ್ಕೆ ಗ್ರಾಮೀಣ ಕ್ರೀಡೆಗಳಾದ ಕುಸ್ತಿ ಪಂದ್ಯಗಳು ನಂತರ ರಾತ್ರಿ ಕಡುಬಿನ ಕಾಳಗ, ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಲಿವೆ ಎಂದರು. 

ಈ ಬಾರಿ ಬರಗಾಲ ಇದ್ದರೂ ಸಹ ಭಕ್ತರು ಜಾತ್ರೆ ಮಹೋತ್ಸವಕ್ಕೆ ತಾಲೂಕಿನ ಗ್ರಾಮೀಣ ಭಾಗದಿಂದ ಮತ್ತು ಸಮೀಪದ ಹಾವೇರಿ,ದಾವಣಗೆರೆ ಗದಗ ಜಿಲ್ಲೆಗಳಿಂದ ಭಕ್ತರು ರೊಟ್ಟಿ,ದವಸ ಧಾನ್ಯಗಳು,ಕಟ್ಟಿಗೆ ಸೇರಿದಂತೆ ತನುಮನ ಧನ ಸಹಾಯ ನೀಡುತ್ತಿದ್ದಾರೆ. 


ಸುದ್ದಿ ಓದಿ