ಧಾರವಾಡ - ಹುಬ್ಬಳ್ಳಿ

ಕಲಾವಿದರಿಗೆ ವೇದಿಕೆ ಬಹಳ ಮುಖ್ಯ: ಶಾಂತರಾಮ್ ಹೆಗಡೆ

ಕಲಾವಿದರಿಗೆ ವೇದಿಕೆ ಬಹಳ ಮುಖ್ಯ: ಶಾಂತರಾಮ್ ಹೆಗಡೆ

ಧಾರವಾಡ 29: ಕಲಾವಿದರಿಗೆ ವೇದಿಕೆ ಬಹಳ ಮುಖ್ಯ. ಇಲ್ಲವಾದರೆ ಕಲೆಗಳು ಕಳೆದುಹೋಗುತ್ತವೆ. ಸಂಗೀತ, ಸಾಹಿತ್ಯ ಎಂಬುದು ಮೊದಲು ವ್ಯವಹಾರಿಕವಾಗಿರಲಿಲ್ಲ. ಅಹೋರಾತ್ರಿ ಜರುಗುವ ಶಾಸ್ತ್ರೀಯ ಸಂಗೀತವನ್ನು ಸಂಗೀತಾಸಕ್ತರು ಬೆಳೆತನಕ ಕುಳಿತು ಕೇಳುತ್ತಿದ್ದ ದಿನಗಳು ಇಂದು ಇಲ್ಲದಾಗಿವೆ ಎಂದು ಶಾಂತರಾಮ್ ಹೆಗಡೆ ಅವರು ಅಭಿಪ್ರಾಯ ಪಟ್ಟರು.  

ಕರ್ನಾಟಕ ವಿದ್ಯಾವರ್ಧಕ ಸಂಘ ಕಲಾಮಂಟಪ ಆಯೋಜಿಸಿದ್ದ ನಿಜಗುಣ ಮಂಗಿಯವರ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. 

ಮೊದಲು ಆಸಕ್ತರ ಮನೆಯಲ್ಲಿ ಅಥವಾ ಸಂಸ್ಥೆಯಲ್ಲೂ ಬೈಠಕಗಳಾಗುತ್ತಿದ್ದವು. ಕಲಾವಿದರಿಗಾಗಿ ಕಲಾವಿದರಿಂದ ಹುಟ್ಟಿಕೊಂಡ ಸಂಸ್ಥೆಗಳು ಇದ್ದವು. ಬೆಳತನಕ ಶಾಸ್ತ್ರೀಯ ಸಂಗೀತ ಕೇಳಲು ಜನ ಆಸಕ್ತಿಯಿಂದ ಬರುತ್ತಿದ್ದರು, ಕೇಳುತ್ತಿದ್ದರು. ಈಗ ಕಲಿಯುವ ಕಲಾವಿದರು ಜಾಸ್ತಿ ಇದ್ದಾರೆ. ಆದರೆ ಅವರಿಗೆ ವೇದಿಕೆಗಳು ಬೇಕಾಗಿದೆ. ಸಂಘ ಈ ದಿಶೆಯಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಹಿರಿಯ ಕಲಾವಿದರನ್ನು, ಯುವ ಕಲಾವಿದರನ್ನು ಕರೆಸಿ ಅವರಿಂದ ಕಾರ್ಯಕ್ರಮಗಳನ್ನು ಮಾಡಿಸುತ್ತಿರುವುದು ಶ್ಲಾಘನೀಯ. 80ರ ದಶಕದಲ್ಲಿ ಮೊಟ್ಟಮೊದಲ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ವಿದ್ಯಾಲಯದಿಂದ ತಾವು ಮಾಡಿದ್ದನ್ನು ನೆನಪಿಸಿಕೊಂಡರು. ಈಗಲೂ ಸಂಗೀತ ಸೆಕ್ಟರ್‌ಗೆ ಕೊರತೆ ಇಲ್ಲ, ಸಂಗೀತ ಕಲಾವಿದರ ಕೊರತೆ ಇಲ್ಲ, ವೇದಿಕೆಗಳು ನಿರ್ಮಾಣವಾಗಬೇಕಿದೆ ಎಂದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹನುಮಂತ ಬುರ್ಲಿ ಮಾತನಾಡಿ ಕಲಾವಿದನಿಗೆ ತುಡಿತವಿರಬೇಕು, ಅಂದರೆ ಮಾತ್ರ ಸಾಧನೆ ಸಾಧ್ಯ. ಸಂಗೀತ ಎಂಬುದು ಎಲ್ಲರಿಗೂ ಒಲಿಯುವುದಲ್ಲ, ಸಾಧನೆಯಿಂದ ಮಾತ್ರ ಸರಸ್ವತಿ ಒಲಿಯುತ್ತಾಳೆ. ತಮ್ಮ ಶಿಷ್ಯ ನಿಜಗುಣ ಮಂಗಿಯವರು ಒಳ್ಳೆಯ ಯುವ ಸಂಗೀತಗಾರರಾಗಿದ್ದು, ಪರಿಶ್ರಮದಿಂದ ಸಾಧನೆ ಮಾಡುತ್ತಿದ್ದಾರೆ ಅವರಿಗೆ ಯಶಸ್ಸು ಸಿಗಲಿ ಎಂದರು. ಕರ್ನಾಟಕ ವಿದ್ಯಾವರ್ಧಕ ಸಂಘ ಇಂತಹ ಕಾರ್ಯಕ್ರಮಗಳನ್ನು ಕಲಾಮಂಟಪದಿಂದ ಆಯೋಜಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಕಲಾವಿದರಿಗೊಂದು ಸಂತಸದ ಸಂಗತಿ ಎಂದರು. ತಾವು ಕೂಡ ಇದೇ ವೇದಿಕೆಯಲ್ಲಿ ದಶಕಗಳ ಹಿಂದೆ ಕಾರ್ಯಕ್ರಮ ನೀಡಿರುವುದನ್ನು ಸ್ಮರಿಸಿಕೊಂಡರು.  

ನಿಜಗುಣ ಮಂಗಿಯವರು ಶಾಸ್ತ್ರೀಯ ಸಂಗೀತದೊಂದಿಗೆ, ವಚನ, ದಾಸರ ಪದ, ಶರೀಫರ ತತ್ವಪದಗಳನ್ನು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವೇದಿಕೆ ಮೇಲೆ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉಪಸ್ಥಿತರಿದ್ದರು.  

ವಿಷಯಾ ಜೇವೂರ ಸ್ವಾಗತಿಸಿದರು. ಕಲಾ ಮಂಪದ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಾ ಹುಕ್ಕೇರಿ ನಿರೂಪಿಸಿದರು, ಖೈರುನ್ನಿಸಾ ಪ್ರಾರ್ಥಿಸಿದರು. ಸುನಿತಾ ವಾಸರದ ವಂದಿಸಿದರು.  

ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ನಂದಾ ಗುಳೇದಗುಡ್ಡ, ಗೀತಾ ಕುಲಕರ್ಣಿ, ನೀಲಾ ಸಿಗ್ಲಿ, ಸುಜಾತ ಗುರವ, ಪುಷ್ಪಾ ಹಿರೇಮಠ, ಇಂದಿರಾ ಸುನಿತಾ, ಸುನಂದ ಹೊಸಮನಿ, ಪಂಡಿತ ಅಶೋಕ ಹುಗ್ಗಣ್ಣನವರ, ಸವಿತಾ ಮಂಗಿ ಮುಂತಾದವರು ಇದ್ದರು. 


ಸುದ್ದಿ ಓದಿ