ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರ ಸ್ಥಾಪನೆಗೆ ಶ್ರೀಶೈಲಗೌಡ ಒತ್ತಾಯ
ಧಾರವಾಡ 18: ಈಗಾಗಲೇ ಹೆಸರು ಬೆಳೆ ರೈತರ ಕೈಸೇರಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಅತಿಯಾದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿ ಇಳುವರಿ ಕುಂಠಿತಗೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಕೈಸೇರಿದ ಅಲ್ಪಸ್ವಲ್ಪ ಬೆಳೆಗೂ ಸರಿಯಾದ ಬೆಲೆ ಸಿಗದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರು ಆರ್ಥಿಕ ತೊಂದರೆಯಿಂದ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಮದ್ಯವರ್ತಿಗಳಿಗೆ ಅಗ್ಗದ ದರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಪರಿಸ್ಥಿತಿ ತಲೆದೋರಿದೆ. ಇದರಿಂದ ರೈತರಿಗೆ ಹಾನಿಯಾಗುತ್ತದೆ. ಈ ಸಮಯದಲ್ಲಿ ಸರಕಾರ ಮತ್ತು ಪ್ರತಿಪಕ್ಷವು ರೈತರ ನೆರವಿಗೆ ಬಾರದೆ, ಹಾರಿಕೆ ಉತ್ತರ ನೀಡುತ್ತಾ ಕಾಲಹರಣ ಮಾಡುವುದನ್ನು ಹಾಗೂ ರೈತರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರಿಗೆ ನೈತಿಕ ಬೆಂಬಲ ನೀಡಬೇಕು.
ಈ ನಿಟ್ಟಿನಲ್ಲಿ ಕೂಡಲೇ ರಾಜ್ಯ ಸರಕಾರ ರೈತರ ಹಿತ ಕಾಪಾಡಲು ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರ ಹಿತ ಕಾಪಾಡಬೇಕೆಂದು ಜನತಾದಳ (ಸಂಯುಕ್ತ) ಪಕ್ಷವು ಸರಕಾರವನ್ನು ಒತ್ತಾಯಿಸುತ್ತದೆ.