ಪ್ರತಿಭೆಯನ್ನು ಪ್ರದರ್ಶಿಸಲು ಕ್ರೀಡಾಕೂಟ ಉತ್ತಮ ವೇದಿಕೆ: ಪಾಟೀಲ
ಲೋಕದರ್ಶನ ವರದಿ
ಕಾಗವಾಡ 30: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವದಿಂದ ಸ್ಪರ್ಧಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದು ಮುಖ್ಯ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ ಹಾಗೂ ಸಿದ್ದೇಶ್ವರ ಪ್ರೌಢ ಶಾಲೆ ಮೋಳೆ ಇವುಗಳ ಸಹಯೋಗದಲ್ಲಿ ಸನ್ 2022-23 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತಾಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ಸೋಮವಾರ ರಂದು ಶಾಶಕ ಶ್ರೀಮಂತ ಪಾಟೀಲ ನೆರವೇರಿಸಿದರು.
ಶಾಸಕರು ಮಾತನಾಡುವಾಗ ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಕಡೆ ಆಸಕ್ತಿ ತೋರುತ್ತಿದ್ದು ಕ್ರೀಡೆಗಳತ್ತ ಅವರಿಗೆ ಗಮನ ಇಲ್ಲದಂತಾಗಿದೆ. ಪೋಷಕರು ಮನೆಗಳಲ್ಲಿ ಮಕ್ಕಳಿಗೆ ಕ್ರೀಡೆಯಲ್ಲು ಭಾಗವಹಿಸಲು ಪ್ರೋತ್ಸಾಹ ನೀಡಬೇಕೆಂದರು.
ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಲು ಪೂರಕವಾಗಿರುತ್ತದೆ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಬೇಕೆಂದು ಶ್ರೀಮಂತ ಪಾಟೀಲ ನುಡಿದರು. ನಿನ್ನೆ ದುಭೈನಲ್ಲಿ ಜರುಗಿದ ಟೀ 20 ಕ್ರೀಕೇಟ್ ಪಂದ್ಯಾವಳಿಯಲ್ಲಿ ಭಾರತದ ತಂಡ ಗೆಲವು ಸಾಧಿಸಿರುವುದು ಸಂತಸ ತಂದಿದೆ ಎಂದರು.
ಶಾಸಕರಿಂದ 5 ಲಕ್ಷ ರೂ. ದೇಣಿಗೆ:
ಶಾಸಕ ಶ್ರೀಮಂತ ಪಾಟೀಲರು ಮೋಳೆ ಗ್ರಾಮದ ಸಿದ್ದೇಶ್ವರ ಶಾಲೆಯಲ್ಲಿ ಮೂರು ವರ್ಷ ಓದಿದ್ದಾರೆ. ಶಾಲೆಯ ಮಾಜಿ ವಿದ್ಯಾರ್ಥಿಯಾಗಿದ್ದರಿಂದ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಸ್ವಂತ ಜೇಬಿನಿಂದ ಸಂಸ್ಥೆಗೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷನೆ ಮಾಡಿದರು.
ತಹಸೀಲ್ದಾರ ರಾಜೇಶ ಬುರ್ಲಿ ಮಾತನಾಡಿ ಪಠ್ಯದ ಜೊತೆಗೆ ಕ್ರೀಡೆಗೂ ಅಷ್ಟೇ ಮಹತ್ವ ಕೊಡಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಯಲ್ಲಿ ಕ್ರಿಡೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಮೋಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಭೂತಾಳಿ ಥರಥರೆ, ಕ್ರೀಡಾ ಜ್ಯೋತಿ ಸ್ವಿಕರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಈಶ್ವರ ವಾಂಡಿಮಾಳಿ, ಕಾಗವಾಡ ತಹಸೀಲ್ದಾರ ರಾಜೇಶ ಬುರ್ಲಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ, ಸಿಡಿಪಿಓ ಸಂಜೀವಕುಮಾರ ಸದಲಗಿ, ದೈಹಿಕ ಶಿಕ್ಷಣ ಪರೀವೀಕ್ಷಕ ಎಂ.ವಾಯ್.ಪೂಜಾರಿ, ಎಚ್.ಎಸ್.ಹುಗ್ಗಿ, ಬಿ.ವೈ.ಹುದ್ದಾರ. ಮುಖ್ಯೋಪಾದ್ಯಾಯ ಶಿವಾನಂದ ಹವಳೆಗೊಳ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಸಂಕಪಾಳ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಗೌಡಪ್ಪ ಸಡ್ಡಿ, ಶಾಲಾ ಆಡಳಿತ ಮಂಡಳಿ, ಗ್ರಮ ಪಂಚಾಯತ್ ಸದಸ್ಯರು. ಶಿಕ್ಷಕರು.ವಿದ್ಯಾರ್ಥಿಗಳು ಉಪಸ್ಥಿತರಿದ್ದರು.