ಬೈಲಹೊಂಗಲ

ಕ್ರೀಡಾ ಸಾಧಕರಾಗಲು ಕ್ರೀಡಾಕೂಟಗಳು ಉತ್ತಮ ವೇದಿಕೆ: ಪಾಟೀಲ

ಕ್ರೀಡಾ ಸಾಧಕರಾಗಲು ಕ್ರೀಡಾಕೂಟಗಳು ಉತ್ತಮ ವೇದಿಕೆ: ಪಾಟೀಲ

ಬೈಲಹೊಂಗಲ 17: ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಕ್ರೀಡೆಗಳಲ್ಲಿ ನೈಪುಣ್ಯತೆ ಹೊಂದಿರುವವರು ಸಾಕಷ್ಟಿದ್ದಾರೆ. ಅಂಥವರಿಗೆ ತಮ್ಮಲ್ಲಿನ ಪ್ರತಿಭೆ ಹೊರ ಹಾಕಿ ಉತ್ತಮ ಕ್ರೀಡಾ ಸಾಧಕರಾಗಲು ಇಲಾಖೆಯಿಂದ ನಡೆಸಲಾಗುವ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು. 

ಅವರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವೀರರಾಣಿ ಮಲ್ಲಮ್ಮ ಸ್ಮಾರಕ ಪಿಯು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಮಲ್ಲಮ್ಮನ ಬೆಳವಡಿಯ ವಿಆರ್‌ಎಮ್ಮೆಸ್ಸ ಕಾಲೇಜು ಆವರಣದಲ್ಲಿ ಮಂಗಳವಾರದಿಂದ ಆರಂಭವಾಗಿರುವ ಬೈಲಹೊಂಗಲ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾ ಕೂಟದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಶಾಸಕ ಮಹಾಂತೇಶ ಕೌಜಲಗಿ ಗುಂಡು ಎಸೆತ ಮಾಡಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪಿಯು ಕಾಲೇಜುಗಳ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಇಂಥ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಪ್ರತಿಭೆ ತೋರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿ ಜಿಲ್ಲೆ ಹಾಗೂ ತಾಲೂಕಿಗೆ ಹೆಸರು ತಂದುಕೊಡವಂತಾಗಲಿ ಎಂದು ಆಶಿಸಿದರು.  

ಗ್ರಾಪಂ ಅಧ್ಯಕ್ಷೆ ರೇಣುಕಾ ಕುರಿ ಕ್ರೀಡಾಧ್ವಜಾರೋಹಣ ನೆರವೇರಿಸಿದರು. ಜಿಪಂ ಸದಸ್ಯ ವೀರಣ್ಣ ಕರೀಕಟ್ಟಿ ಕ್ರೀಡಾ ಜ್ಯೋತಿ ಸ್ವಾಗತಿಸಿದರು. ಇದೇ ವೇಳೆ ಕ್ರೀಡಾಕೂಟದ ಯಶಸ್ಸಿಗೆ ಸಹಾಯ ಸಹಕಾರ ನೀಡಿದ ಗಣ್ಯರನ್ನು ಸತ್ಕರಿಸಿ ಗೌರವಿಸಲಾಯಿತು.  

ವೇದಿಕೆ ಮೇಲೆ ಗದಗಯ್ಯ ರೊಟ್ಟಯ್ಯನವರ, ಚಂದ್ರಶೇಖರಯ್ಯ ಕಾರಿಮನಿ, ಬಸವರಾಜ ಬಿಲ್ಲಶಿವಣ್ಣವರ, ನಿಂಗಣ್ಣ ನೇಸರಗಿ, ಶಂಕರ ಪತ್ತಾರ, ಯು. ಶಂಕರಶೆಟ್ಟಿ, ಪ್ರಭು ಶಿವನಾಯ್ಕರ, ಎಂ.ಧನ್ವಂತ, ಸುನೀಲ ವೆರ್ಣೇಕರ, ವಿ.ಎಸ್‌.ಬಳಿಗಾರ, ಎ.ಆರ್‌.ಮಾರಿಹಾಳ, ಎಮ್‌.ಎಮ್‌.ಕಾಡೇಶನವರ, ಎನ್‌.ಸಿ.ಯರಗಂಬಳಿಮಠ ಇದ್ದರು. 

 ದೈಹಿಕ ಶಿಕ್ಷಣ ಉಪನ್ಯಾಸಕ ಎಮ್‌.ಪಿ.ಉಪ್ಪಿನ ನಿರೂಪಿಸಿದರು. ಎಸ್‌.ಎಮ್‌.ಕರೀಕಟ್ಟಿ ವಂದಿಸಿದರು. ತಾಲೂಕಿನ ವಿವಿಧ ಪ್ರೌಢ ಹಾಗೂ ಪಿಯು ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಪ್ರಾಚಾರ್ಯರು ಉಪನ್ಯಾಸಕರು ಕ್ರೀಡಾಪಟುಗಳು ಸೇರಿದ್ದರು. 


ಸುದ್ದಿ ಓದಿ