ಕ್ರೀಡೆಗಳು ಅತ್ಯುತ್ತಮ ಜೀವನಕ್ಕೆ ಅಡಿಪಾಯ: ಗುಂಜಾಳ
ಧಾರವಾಡ 22: ಕ್ರೀಡೆಗಳು ಅತ್ಯುತ್ತಮ ಜೀವನಕ್ಕೆ ಅಡಿಪಾಯವಾಗಿವೆ. ಕ್ರೀಡಾಪಟು ಉತ್ತಮ ಆರೋಗ್ಯಯುತ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು ಮಾಜಿ ಪ್ಯಾರಾ ಓಲಂಪಿಯನ್ ಶಿವಾನಂದ ಗುಂಜಾಳ ಅವರು ತಿಳಿಸಿದರು.
ಅವರು ಧಾರವಾಡದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆ.ಇ.ಬೋರ್ಡ್ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ದೇಶ-ವಿದೇಶಗಳಲ್ಲಿ ಯಾವುದೇ ಭಾಗಗಳಲ್ಲಿ ಸಂಚರಿಸಿದರೂ ಕೆ.ಇ.ಬೋರ್ಡಿನ ವಿದ್ಯಾರ್ಥಿಗಳು ಇರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳದ ವಿಷ್ಣು ನಾರಾಯಣ ಹೆಬ್ಬಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡೆಯು ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಲು ಅತ್ಯುತ್ತಮ ಓಷಧವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಡಾ. ಕೃಷ್ಣ ಕುಲಕರ್ಣಿಯವರು ವಹಿಸಿದ್ದರು. ಕೆ.ಇ.ಬೋರ್ಡಿನ ಕ್ರೀಡಾ ಅಭಿವೃದ್ಧಿ ಅಧಿಕಾರಿಗಳಾದ ವಸಂತ ಮುರ್ಡೇಶ್ವರ, ಉಪಪ್ರಾಚಾರ್ಯರಾದ ಎನ್.ಎಸ್ ಗೋವಿಂದರಡ್ಡಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶರಣಪ್ಪ ಗುತ್ತೂರ, ಶಾಲಾ ಪ್ರಧಾನಿ ಕು. ಪ್ರೀತಮ ಹಡಪದ, ಕ್ರೀಡಾಮಂತ್ರಿ ಕು. ರಮ್ಯಾ ಜೋಶಿ ಉಪಸ್ಥಿತರಿದ್ದರು. ಸಂಗಮೇಶ ಹಡಪದ ಸ್ವಾಗತಿಸಿ ಪರಿಚಯಿಸಿದರು, ಕು. ಸುಶ್ಮಿತಾ ಚೌಹಾಣ, ಕು. ಅಮೂಲ್ಯಾ ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಾಲಾ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಮುದ್ದು ಮಕ್ಕಳು ಹಾಜರಿದ್ದರು.