ತಾತ್ಕಾಲಿಕ ಗೋದಾಮು ಮುರಿದು ಬಿದ್ದು ಕೋಟ್ಯಂತರ ರೂ. ಮೌಲ್ಯದ ಸಕ್ಕರೆ ಹಾಳು
ಇಂಡಿ: ಭಾನುವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಮರಗೂರದಲ್ಲಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿನ ತಾತ್ಕಾಲಿಕ ಗೋದಾಮಿನ ಮೇಲ್ಚಾವಣಿ ಹರಿದು ಗೋದಾಮು ಮುರಿದು ಬಿದ್ದು ಕೋಟ್ಯಂತರ ರೂಪಾಯಿ ಮೌಲ್ಯದ ಸಕ್ಕರೆ ಹಾಳಾಗಿದೆ.
ಈ ವರ್ಷ ಸುಮಾರು 5,34,754 ಮೆಟ್ರಿಕ್ ಟನ್ ಕಬ್ಬು ನುರಿಸಿ 5,47,100 ಕ್ವಿಂಟಲ್ ಸಕ್ಕರೆ ಉತ್ಪಾದನೆ ಆಗಿತ್ತು. ಕಾರ್ಖಾನೆಯಲ್ಲಿ 2 ಖಾಯಂ ಸಕ್ಕರೆ ಗೋದಾಮುಗಳಿದ್ದು ಗೋದಾಮು ನಂ 01 ರಲ್ಲಿ 1,25,000 ಕ್ವಿಂಟಲ್ ಮತ್ತು ಗೋದಾಮು ನಂ 02 ರಲ್ಲಿ 2,25,000 ಕ್ವಿಂಟಲ್ ಸಕ್ಕರೆ ದಾಸ್ತಾನು ಮಾಡಿದ್ದು ಮತ್ತು ಹೆಚ್ಚುವರಿ ಸಕ್ಕರೆ ಚೀಲಗಳನ್ನು ತಾತ್ಕಾಲಿಕ ಗೋದಾಮಿನಲ್ಲಿ ಶೇಖರಣೆ ಮಾಡಲಾಗಿತ್ತು.
ಸಕ್ಕರೆ ವಿಕ್ರಯ ಪರವಾನಿಗೆ ಅನುಸಾರವಾಗಿ ಸಕ್ಕರೆಯನ್ನು ಮಾರಾಟ ಮಾಡಬೇಕಾಗಿರುವುದರಿಂದ ಹೆಚ್ಚುವರಿ ಸಕ್ಕರೆಯನ್ನು ತಾತ್ಕಾಲಿಕ ಗೋದಾಮಿನಲ್ಲಿ ಶೇಖರಣೆ ಮಾಡಿದ್ದು, ಏಪ್ರಿಲ್ 10 ರ ಭಾನುವಾರ ರಾತ್ರಿ ಸುರಿದ ಅಕಾಲಿಕ ಗುಡುಗು ಮಿಶ್ರಿತ ಬಿರುಗಾಳಿ ರಭಸಕ್ಕೆ ತಾತ್ಕಾಲಿಕ ಸಕ್ಕರೆ ಗೋದಾಮಿನ ಮೇಲ್ಚಾವಣೆ ಹರಿದು ಗೋದಾಮು ಮುರಿದು ಬಿದ್ದಿದೆ.
ರಾತ್ರಿ 8:05 ಕ್ಕೆ ಜೋರಾಗಿ ಗುಡುಗು ಮಿಶ್ರಿತ ಮಳೆ ಬಂದು ಗೋದಾಮಿನಲ್ಲಿರುವ ಸುಮಾರು 31,890 ಕ್ವಿಂಟಲ್ ಸಕ್ಕರೆ (50 ಕೆಜಿಯ 63,780) ಚೀಲಗಳು ಮಳೆ ನೀರಿನಿಂದ ಆವೃತವಾಗಿ ಹಾನಿ ಸಂಭವಿಸಿದ್ದು, ಸರಕಾರ ಹಾನಿಯನ್ನು ಭರಿಸಲು ಸರಕಾರಕ್ಕೆ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ ಎಂದು ಕಾರ್ಖಾನೆಯ ಪ್ರಕಟಣೆ ತಿಳಿಸಿದೆ.