ಆಧ್ಯಾತ್ಮಿಕ ವಿಚಾರಧಾರೆ ಜೀವನ ಉನ್ನತಿಗೆ ಕಾರಣ: ಮುರಗೇಂದ್ರ ಶ್ರೀ
ಇಂಡಿ: ಸಂಪತ್ತು ಸಂಪಾದಿಸುವದೊಂದೆ ಮನುಷ್ಯನ ಗುರಿಯಾಗಬಾರದು. ಸಂಪತ್ತಿನೊಂದಿಗೆ ಸ್ವಲ್ಪವಾದರೂ ಆಧ್ಯಾತ್ಮಿಕ ವಿಚಾರಗಳನ್ನು ಅರಿತು ನಡೆಯುವದು ಜೀವನ ಉನ್ನತಿಗೆ ಕಾರಣ ವಾಗುತ್ತದೆ ಎಂದು ಶಿರಶ್ಯಾಡದ ಸಂಸ್ಥಾನ ಮಠದ ಮುರಗೇಂದ್ರ ಶಿವಾಚಾರ್ಯರರು ಹೇಳಿದರು.
ಶುಕ್ರವಾರ ಪಟ್ಟಣದ ಶಾಂತೇಶ್ವರ ದೇವಸ್ಥಾನದಲ್ಲಿ ಛಟಿ ಜಾತ್ರಾ ಮಹೋತ್ಸವ ನಿಮಿತ್ಯ ಅಕ್ಕಮಹಾದೇವಿ ಮಹಿಳಾ ಬಳಗ, ಕದಳಿ ವೇದಿಕೆ, ಸಾಯಿ ಮಹಿಳಾ ಸಮಿತಿ, ವಿವೇಕ ಸಂಪತ್ತು, ಬಸವ ಸಮಿತಿ ಮಹಿಳಾ ಬಳಗ, ಲಕ್ಷ್ಮೀ ಸಮಿತಿ ಸೇರಿದಂತೆ ಪಟ್ಟಣದ ಎಲ್ಲ ಮಹಿಳಾ ವೇದಿಕೆಯಿಂದ ನಡೆದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಮನುಷ್ಯನಿಗೆ ಶಾಂತಿ, ನೆಮ್ಮದಿ, ಪ್ರೀತಿ, ವಿಶ್ವಾಸ, ಸಹಬಾಳ್ವೆ ದೇವಸ್ಥಾನಗಳಲ್ಲಿ ಮಾತ್ರ ದೊರೆಯುತ್ತದೆ ಎಂದ ಅವರು, 21 ನೆಯ ಶತಮಾನದಲ್ಲಿ ಧರ್ಮ ಮತ್ತು ಸಂಸ್ಕಾರ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ದೇಶದ ಭದ್ರ ಬುನಾದಿ ಆಧ್ಯಾತ್ಮಿಕ ಸ್ಪರ್ಶ ಮತ್ತು ಗುರು ಪರಂಪರೆ, ನಮ್ಮದು ಶ್ರೇಷ್ಠವಾದ ಕೊಡುಗೆ ಗುರುಪರಂಪರೆ ಮತ್ತು ಸಂಸ್ಕಾರ ಎಂದರು.
ಕಾಸುಗೌಡ ಬಿರಾದಾರ ಮತ್ತು ನಿವೃತ್ತ ಪ್ರಾಚಾಯರ್ೆ ಶೈಲಜಾ ಕಾಸುಗೌಡ ಬಿರಾದಾರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಹಿರೇಮಠದ ಶಾಂತಯ್ಯ ಗುರುಗಳು, ಮಹಾಂತೇಶ ಹಿರೇಮಠ, ದಾನಯ್ಯ ಪತ್ರಿಮಠ, ಅನೀಲಗೌಡ ಬಿರಾದಾರ, ರಾಮಸಿಂಗ ಕನ್ನೊಳ್ಳಿ, ಅಶೋಕಗೌಡ ಬೀರಾದಾರ, ಮಲ್ಲಣ್ಣ ಜೋರಾಪುರ, ಕಿರಣ ಕ್ಷತ್ರಿ, ಅಶೋಕ ಬಿರಾದಾರ, ಹಣಮಂತ ಹೊಟಗಿ, ಶ್ರೀಕಾಂತ ಕೂಡಿಗನೂರ, ರಾಜೇಶ್ವರಿ ಕ್ಷತ್ರಿ, ನಿರ್ಮಲಾ ಸುರಪುರ, ಶಶಿಕಲಾ ಬೇಟಗೇರಿ, ಸುನಂದಾ ಗಿರಣಿವಡ್ಡರ ಸೇರಿದಂತೆ ವಿವಿಧ ಮಹಿಳಾ ವೇದಿಕೆಯಲ್ಲಿ ಇದ್ದರು.
ಸುಮಾರು ಐದು ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.