ಧಾರವಾಡ - ಹುಬ್ಬಳ್ಳಿ

ಮಾದಕವಸ್ತು ಮುಕ್ತ ಜಿಲ್ಲೆಗಾಗಿ ನವೆಂಬರದಿಂದ ವಿಶೇಷ ಜಾಗೃತಿ ಕಾರ್ಯಕ್ರಮ: ಡಿಸಿ ದಿವ್ಯ ಪ್ರಭು

ಮಾದಕವಸ್ತು ಮುಕ್ತ ಜಿಲ್ಲೆಗಾಗಿ ನವೆಂಬರದಿಂದ ವಿಶೇಷ ಜಾಗೃತಿ ಕಾರ್ಯಕ್ರಮ: ಡಿಸಿ ದಿವ್ಯ ಪ್ರಭು


ಮಾದಕವಸ್ತು ಮುಕ್ತ ಜಿಲ್ಲೆಗಾಗಿ ನವೆಂಬರದಿಂದ ವಿಶೇಷ ಜಾಗೃತಿ ಕಾರ್ಯಕ್ರಮ: ಡಿಸಿ ದಿವ್ಯ ಪ್ರಭು 


ಧಾರವಾಡ 25: ಬರುವ ನವೆಂಬರ ಹಾಗೂ ಡಿಸೆಂಬರ ತಿಂಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆ ಆಗಿ ಮಾಡಲು ಕ್ರಮವಹಿಸಲಾಗುವುದು. ಮಾದಕವಸ್ತು ಮುಕ್ತ ಜಿಲ್ಲೆಗಾಗಿ ಶಾಲಾ ಕಾಲೇಜುಗಳಲ್ಲಿ ಒಂದು ತಿಂಗಳ ಪರಿಯಂತರ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.  

ಅವರು ಅ.24ರಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾದಕವಸ್ತು ನಿಯಂತ್ರಣ ಹಾಗೂ ನಿರ್ಮೂಲನೆ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರೀಶೀಲನೆ ಸಭೆ ಜರುಗಿಸಿ, ಮಾತನಾಡಿದರು.  

ಮಾದಕವಸ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ, ತಿಳುವಳಿಕೆ ಮೂಡಿಸಬೇಕು. ಮಾದಕವಸ್ತುಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ಅವರು ಹೇಳಿದರು.  

ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆ ಆಗಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯಕ್ರಮ ರೂಪಿಸಬೇಕು. ಬರುವ ನವೆಂಬರ ಮತ್ತು ಡಿಸೆಂಬರ ತಿಂಗಳಲ್ಲಿ ಡ್ರಗ್ಸ್‌ ಕುರಿತು ಶಾಲಾ ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ, ಕಿರುನಾಟಕ, ಏಕಪಾತ್ರಾಭಿನಯದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿಯಾನ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಹಾಗೂ ಪೊಲೀಸ್ ಆಯುಕ್ತಾಲಯ, ಶಿಕ್ಷಣ ಸಂಸ್ಥೆ, ಶಿಕ್ಷಣ, ಆರೋಗ್ಯ ಇಲಾಖೆಗಳ ಜೊತೆ ಚರ್ಚಿಸಿ, ಯೋಜನೆ ರೂಪಿಸಿಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಪ್ರತಿ ಕಾಲೇಜುಗಳಿಗೆ ತಮ್ಮ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮತ್ತು ಸಿಬ್ಬಂದಿಗಳಿಗೆ ಡ್ರಗ್ಸ್‌ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಲಾಗುವುದು ಎಂದು ಅವರು ಹೇಳಿದರು.  

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಂಚೆ ಕಚೇರಿಗೆ ಭೇಟಿ ನೀಡಿ, ಪಾರ್ಸಲ್‌ಗಳ ಬಗ್ಗೆ, ಸಂಶಯಾಸ್ಪದ ಕೋರಿಯರ್, ಪೋಸ್ಟ್‌ಗಳ ಬಗ್ಗೆ ಮತ್ತು ಅತಿ ಹೆಚ್ಚು ಪೊಸ್ಟ್‌, ಪಾರ್ಸಲ್ ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪರೀಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.  

ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಮಾದಕವಸ್ತು, ಕಳ್ಳಬಟ್ಟಿ ಬಗ್ಗೆ ಎಚ್ಚರಿಕೆ ವಹಿಸಿ, ಅಂತಹ ಪ್ರಕರಣ ತಿಳಿದು ಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಲಾಗುತ್ತಿದೆ. ಅವಳಿನಗರ ಹೊರತು ಪಡಿಸಿ ಜಿಲ್ಲೆಯ ಎಲ್ಲ ನಗರ ಹಾಗೂ ದೊಡ್ಡ ಗ್ರಾಮಗಳಲ್ಲಿ, ಎಲ್ಲ ಹಂತದ ಕಾಲೇಜುಗಳಲ್ಲಿ ಡ್ರಗ್ಸ್‌ ಕುರಿತು ವಿವಿಧ ರೀತಿ ತಿಳುವಳಿಕೆ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಸಮನ್ವಯದಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.  

ಸಭೆಯಲ್ಲಿ ಡಿವೈಎಸ್‌ಪಿ ಶಿವಾನಂದ ಕಟಗಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ, ಎಸ್‌.ಡಿ.ಎಮ್‌. ಕಾಲೇಜಿನ ಎಸ್‌.ಎಂ.ಓ ಡಾ. ರೋಶನ್ ಆರ್‌., ಧಾರವಾಡ ಉಪವಿಭಾಗದ ಡಿವಾಯ್‌ಎಸ್‌ಇ ದೀಪಕ ಎಸ್, ಎಸಿಪಿ ಡಾ. ಶಿವರಾಜ.ಕೆ.ಕೊಕಟಭಾವಿ, ಡಿಎಲ್‌ಓ ಡಾ. ಕಳಸೂರಮಠ ಎಸ್‌.ಬಿ., ಡಿಎಮ್‌ಎಚ್‌ಪಿ ಡಾ. ರಾಘವೇಂದ್ರ ಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ ಎಸ್‌.ಸಿ, ಧಾರವಾಡ ಐಐಟಿಯ ಅಣ್ಣಪ್ಪ ಜಿ.ಕೆ, ಎನ್‌.ಡಬ್ಲ್ಯು.ಆರ್‌.ಟಿ.ಸಿಯ ಡಿಸಿ ಎಸ್‌.ಬಿ. ಚನ್ನಪ್ಪಗೌಡರ, ಕಾರ್ಮಿಕ ಇಲಾಖೆ ರಾಜೇಂದ್ರ ಆರ್‌.ಎಮ್, ಕೆ.ಎಲ್‌.ಇ ತಾಂತ್ರಿಕ ವಿದ್ಯಾಲಯದ ಡೀನ್ ಡಾ. ಪಂಡಿತ ಆರಾಧ್ಯ ಬಿ.ಟಿ., ಡಾ. ಸಂಜೀವ ಜೆ.ಕೆ, ನೀಲಮ್ಮಾ ಅಶೋಕ ಕೊಟುರ, ಪರಿಮಳಾ.ವಿ.ಎಚ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲಾ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.  

(ಫೋಟೊ ಇವೆ) 

****** 

ಇಂದು  ವಿದ್ಯುತ್ ವ್ಯತ್ಯಯ 


ಧಾರವಾಡ 25: 110 ಕೆವ್ಹಿ. ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಜಾಗುವ 11 ಕೆವ್ಹಿ ಮುರುಘಾಮಠ ಫೀಡರ್ ಮಾರ್ಗದ ಮೇಲೆ ಅಕ್ಟೋಬರ್ 26, 2024 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ 11 ಕೆವ್ಹಿ ಮಾರ್ಗದಲ್ಲಿ (ದಿನಾಂಕ: 26/10/2024) ರಂದು ಬೆಳಿಗ್ಗೆ 10-00ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಕಳ್ಳಿಮನಿ ಪ್ಲಾಟ್,  ಶಿವನಗರ,  ಮಲ್ಲಿಕಾರ್ಜುನ ನಗರ, ಮುರುಘಾಮಠ, ಮೂರು ಸಾವಿರ ಮಠ, ಎಪಿಎಂಸಿ, ಮದಿಹಾಳ, ರಾಜನಗರ, ಮಟ್ಟಿ ಪ್ಲಾಟ್, ಕೆಎಸ್‌ಆರ್‌ಟಿಸಿ ಡಿಪೋ, ಹಾವೇರಿಪೇಟ,  ಗೊಲ್ಲರ ಕಾಲಿನಿ, ಹೆಬ್ಬಳ್ಳಿ ಅಗಸಿ, ದೈವಜ್ಯ ನಗರ, ಮಣಿಕಂಠ ನಗರ, ಎಂಆರ್ ನಗರ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ. 

**** 

ಅ.29 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ. 


ಧಾರವಾಡ 25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ 9 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಅಕ್ಟೋಬರ್ 29 ರಂದು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಭಾಭವನದಲ್ಲಿ ಆಯೋಜಿಸಲಾಗಿದೆ.  

ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸುವರು. 

ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್‌. ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. 

 ಕರ್ನಾಟಕ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ, ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧ್ಯಕ್ಷ ವಿನಯ ಕುಲಕರ್ಣಿ, ಶಾಸಕ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ, ಶಾಸಕ ಹಾಗೂ ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ಭರಮಗೌಡ ಅಲಗೌಡ ಕಾಗೆ, ಶಾಸಕರು ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜೆ.ಎನ್‌.ಗಣೇಶ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು.  

ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. 

ಮುಖ್ಯ ಅತಿಥಿಗಳಾಗಿ ಶಾಸಕರಾದ ಎನ್‌.ಎಚ್ ಕೋನರಡ್ಡಿ, ಎಸ್‌.ವ್ಹಿ.ಸಂಕನೂರ, ಪ್ರದೀಪ ಶೆಟ್ಟರ, ಮಹೇಶ ಟೆಂಗಿನಕಾಯಿ, ಎಂ.ಆರ್‌.ಪಾಟೀಲ್, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ರಾಮಪ್ಪ ಕೃಷ್ಣಪ್ಪ ಬಡಿಗೇರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ ಅವರು ಪಾಲ್ಗೋಳುವರು. 

ಆಯುಷ್ ಇಲಾಖೆಯ ಆಯುಕ್ತ ಶ್ರೀನಿವಾಸುಲು, ಜಿಲ್ಲಾಧಿಕಾರಿ ದಿವ್ಯ ಪ್ರಭು, ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಹುಬ್ಬಳ್ಳಿ-ಧಾರವಾಡ  ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ ಅವರು ಭಾಗವಹಿಸುವರೆಂದು ಜಿಲ್ಲಾ ಆಯುಷ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 


ಸುದ್ದಿ ಓದಿ